

ಮುಂಬೈ: ದೊಡ್ಡ ದೊಡ್ಡ ಯಂತ್ರಗಳಿಂದ ಮಾಡುವ ಎಷ್ಟೋ ಕೆಲಸಗಳನ್ನು ರೈತಾಪಿ ವರ್ಗದವರು ದಿನನಿತ್ಯ ಬಳಸುವ ವಸ್ತುಗಳಿಂದ ಮಾಡುವ ಮೂಲಕ ಎಲ್ಲರ ಹುಬ್ಬೇರಿಸುವುದು ನಡೆದೇ ಇದೆ. ಕೃಷಿಯಲ್ಲಿ ತಂತ್ರಜ್ಞಾನ ಮುಂದುವರೆಯುವುದು ಒಂದೆಡೆಯಾದರೆ, ತಮ್ಮ ಕೃಷಿ ಕೆಲಸಕ್ಕೆ ಪರ್ಯಾಯವಾಗಿ ಸುಲಭ ಮಾರ್ಗಗಳನ್ನು ಕಂಡುಕೊಂಡು ಅದರಲ್ಲಿ ಯಶಸ್ವಿಯಾಗುತ್ತಿರುವ ರೈತವರ್ಗ ಇನ್ನೊಂದೆಡೆ.
ಅದರಲ್ಲಿಯೂ ಧಾನ್ಯಗಳನ್ನು ಶುಚಿಗೊಳಿಸುವುದು, ಕೃಷಿಭೂಮಿ ಹಸನು ಮಾಡುವುದು... ಹೀಗೆ ಅನೇಕ ಕೆಲಸಗಳಲ್ಲಿ ಹೊಸಹೊಸ ವಿಧಾನಗಳನ್ನು ಈಗಿನ ಕೃಷಿಕರು ಕಂಡುಕೊಳ್ಳುತ್ತಿದ್ದಾರೆ.
ಅಂಥದ್ದೇ ಒಂದು ವಿಶಿಷ್ಟ ಎನಿಸುವ ಕೃಷಿ ಚಟುವಟಿಕೆಯನ್ನು ಮಹಾರಾಷ್ಟ್ರದ ಕೃಷಿಕರು ಮಾಡಿದ್ದು, ಅದನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇವರು ಶೇರ್ ಮಾಡಿರುವ ವಿಡಿಯೋದಲ್ಲಿ ಕೆಲವು ಕೃಷಿಕರು ಮೆಕ್ಕೆಜೋಳವನ್ನು ಬೈಕ್‌ನ ಚಕ್ರ ತಿರುಗಿಸುವ ಮೂಲಕ ಬಿಡಿಸುತ್ತಿರುವ ದೃಶ್ಯ ಕಾಣಬಹುದು.
‘ಬೈಕ್ ಮತ್ತು ಟ್ರ್ಯಾಕ್ಟರ್‌ಗಳನ್ನು ಬಳಸಿ ರೈತಾಪಿ ವರ್ಗದವರು ಏನೆಲ್ಲಾ ಸಾಹಸಮಯ ಕೃಷಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಇದು ಕೂಡ ಅತ್ಯಂತ ಶ್ಲಾಘನಾರ್ಹವಾದುದು. ಬೈಕ್‌ನಿಂದ ಇಂಥದ್ದೊಂದು ವಿಶಿಷ್ಟ ಕೆಲಸ ಮಾಡಲು ಸಾಧ್ಯ ಎಂಬುದನ್ನು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ’ ಎಂದು ಆನಂದ್ ಅವರು ತಿಳಿಸಿದ್ದಾರೆ.
ಇದಾಗಲೇ ಹಲವಾರು ಇಂಥ ವೈವಿಧ್ಯಮಯ, ಅಪರೂಪದ ಕೃಷಿ ಚಟುವಟಿಕೆಗಳ ಬಗ್ಗೆ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡುತ್ತಲೇ ಬಂದಿದ್ದಾರೆ. ಇದೀಗ ಮೆಕ್ಕೆಜೋಳ ಬೆಳೆಗಾರರ ಈ ವಿಶಿಷ್ಟ ಪ್ರಯೋಗ ಸಾವಿರಾರು ಮಂದಿಯ ಹೃದಯ ಗೆದ್ದಿದೆ.
ಬೈಕ್ ಸ್ಟಾರ್ಟ್ ಮಾಡಿ ಅದನ್ನು ಮೊದಲ ಗೇರ್‌ನಲ್ಲಿ ಇರಿಸಿದರೆ, ಈ ರೀತಿ ಮೆಕ್ಕೆಜೋಳವನ್ನು ಬಿಡಿಸಬಹುದು ಎಂಬ ಟಿಪ್ಸ್ ಕೂಡ ಅವರು ನೀಡಿದ್ದಾರೆ.