

ಮುಂಬೈ: ಸದ್ಯ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್‌ನ ಡ್ರಗ್ಸ್ ಹಗರಣ ಸಾಕಷ್ಟು ಸುದ್ದಿ ಮಾಡುತ್ತಿರುವ ಬೆನ್ನಲ್ಲೇ ಮುಂಬೈ ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಲಂಚದ ಗಂಭೀರ ಆರೋಪ ಕೇಳಿಬಂದಿದೆ. ಆರ್ಯನ್ ಖಾನ್ ಕೇಸ್ ಮುಚ್ಚಿಹಾಕಲು ಇವರು 25 ಕೋಟಿ ರೂಪಾಯಿ ಲಂಚ ಕೇಳಿದ್ದಾರೆ ಎಂಬ ಆರೋಪ ಬಂದಿದ್ದು, ಇದರ ವಿಚಾರಣೆ ಕೂಡ ನಡೆಯುತ್ತಿದೆ.
ಈ ಮಧ್ಯೆಯೇ ವಾಂಖೆಡೆ ಅವರ ಕುಟುಂಬಸ್ಥರನ್ನು ಈ ಕೇಸ್‌ನಲ್ಲಿ ಮಧ್ಯೆ ತರಲಾಗಿದೆ. ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ವಾಂಖೆಡೆ ಅವರ ಮೇಲೆ ವೈಯಕ್ತಿಕ ದಾಳಿ ನಡೆಸಿದ್ದು, ನಕಲಿ ಪ್ರಮಾಣಪತ್ರಗಳ ಆಧಾರದ ಮೇಲೆ ವಾಂಖೇಡೆ ಸರ್ಕಾರಿ ಉದ್ಯೋಗ ಪಡೆದಿದ್ದಾರೆ, ವಾಂಖೆಡೆ ಅವರ ತಾಯಿ ಹಿಂದೂ, ತಂದೆ ಮುಸ್ಲಿಂ ಆಗಿದ್ದು, ವಾಖೆಂಡೆ ಅವರು ಮುಸ್ಲಿಂ ಹುಡುಗಿಯನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದರು. ಮಲಿಕ್ ಅವರ ಈ ಮಾತಿಗೆ ಅವರ ಬೆಂಬಲಿಗರು ಹೌದು ಹೌದು ಎಂದು ತಲೆಯಾಡಿಸಿದ್ದರು.
ಇದೀಗ ಪತಿಯ ಪರವಾಗಿ ಟೊಂಕಕಟ್ಟಿ ನಿಂತು ವಾಂಖೆಡೆ ಅವರ ಪತ್ನಿ, ಬಹುಭಾಷಾ ನಟಿ ಕ್ರಾಂತಿ ರೆಡ್ಕರ್ ತಮ್ಮ ಮದುವೆ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಎಲ್ಲರ ಬಾಯಿಯನ್ನು ಮುಚ್ಚಿಸಿದ್ದಾರೆ. ಮದುವೆಯ ಕುರಿತು ಆಗುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ನಾನು ಹಿಂದೂ. ನನ್ನ ಗಂಡನೂ ಹಿಂದೂ. ಇಬ್ಬರೂ ಹುಟ್ಟಿದ್ದು ಹಿಂದೂವಾಗಿಯೇ. ನಾನು ಯಾವತ್ತೂ ಮತಾಂತರಗೊಂಡವಳಲ್ಲ, ಮೊದಲು ಎಲ್ಲಾ ಧರ್ಮಗಳನ್ನು ಗೌರವಿಸುವುದನ್ನು ಕಲಿಯಿರಿ. ಸಮೀರ್ ತಂದೆ ಹಿಂದೂ ಹಾಗೂ ತಾಯಿ ಮುಸ್ಲಿಂ ಆಗಿದ್ದುದು ನಿಜ. ಈ ಮದುವೆ ವಿಶೇಷ ವಿವಾಹ ಕಾಯ್ದೆಯಡಿ ನಡೆದಿತ್ತು. ಕಾನೂನು ಬಾಹಿರವಾಗಿ ನಡೆದಿರಲಿಲ್ಲ. 2016 ರಲ್ಲಿ ಅವರು ಕಾನೂನುಬದ್ಧವಾಗಿಯೇ ವಿಚ್ಛೇದನ ಪಡೆದಿದ್ದಾರೆ. ನಾನು ಮತ್ತು ಸಮೀರ್ ಹಿಂದೂ ಆಗಿರುವ ಕಾರಣ ನಾವು ಹಿಂದೂ ವಿವಾಹ ಕಾಯ್ದೆ 2017 ರ ಅಡಿಯಲ್ಲಿ ವಿವಾಹವಾಗಿದ್ದೇವೆ ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ.
ಶತ್ರು ಕೂಡ ನನ್ನ ಗಂಡನ ತಪ್ಪೆಂದು ಹೇಳುವುದಿಲ್ಲ. ಸಮೀರ್ 15 ವರ್ಷಗಳಲ್ಲಿ ದೇಶಕ್ಕೆ ಸೇವೆ ಸಲ್ಲಿಸುವ ಮೂಲಕ ಈ ಗೌರವವನ್ನು ಹೊಂದಿದ್ದಾರೆ. ಅವರು ಕ್ಲೀನ್ ಇಮೇಜ್ ಹೊಂದಿರುವ ಅಧಿಕಾರಿ. ಈ ಡ್ರಗ್ ಪ್ರಕರಣದಿಂದ ಅವರನ್ನು ತೆಗೆದುಹಾಕಲು ಅನೇಕರು ಬಯಸುತ್ತಾರೆ. ಆದ್ದರಿಂದ ಕುಟುಂಬವನ್ನೂ ಮಧ್ಯೆ ಎಳೆದುತಂದು ನಾಚಿಗೆಗೇಡಿನ ಕೆಲಸ ಮಾಡಿದ್ದಾರೆ ಎಂದಿದ್ದಾರೆ.