ಟೈಲರ್​ನಂತೆ ಉದ್ಯಮಿ ರುಂಡ ತುಂಡರಿಸಲು ನಡೆದಿತ್ತು ಸಂಚು: ತಪ್ಪಿಸಿಕೊಂಡದ್ದು ಹೇಗೆ? ತಂದೆ ಹೇಳಿದ್ದೇನು?

udaypur
Published on

ಉದಯಪುರ (ರಾಜಸ್ಥಾನ): ಹಿಂದೂ ದೇವರ ವಿರುದ್ಧ ಅವಹೇಳನಕಾರಿಯಾಗಿರುವ ಹೇಳಿಕೆಯನ್ನು ಸಹಿಸದೇ ಬಿಜೆಪಿ ಮುಖಂಡೆ ನೂಪುರ್​ ಶರ್ಮಾ ಪ್ರವಾದಿ ಮೊಹಮ್ಮದ್​ ವಿರುದ್ಧ ಹೇಳಿರುವ ಮಾತು ಕಾಂಗ್ರೆಸ್ಸಿಗರು ಸೇರಿದಂತೆ ಇಸ್ಲಾಮಿಕ್​ ರಾಷ್ಟ್ರವನ್ನು ಭಾರಿ ಕೆರಳಿಸಿದೆ. ನೂಪುರ್​ ಹೇಳಿಕೆ ವಿರುದ್ಧ ಹಿಂಸಾಚಾರಕ್ಕೆ ಇಳಿಯಲಾಗಿದ್ದು, ಪ್ರತಿಭಟನೆಗಳು ಮುಂದುವರೆದಿವೆ.

ಇದರ ಬೆನ್ನಲ್ಲೇ ನೂಪುರ್​ ಶರ್ಮಾ ಅವರು ಹೇಳಿರುವುದನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದ ರಾಜಸ್ಥಾನದ ಉದಯ​ಪುರದ ಟೈಲರ್​ ಕನ್ಹಯ್ಯಾ ಲಾಲ್ ಶಿರಚ್ಛೇದನ ಮಾಡಿ ಅದರ ವಿಡಿಯೋ ಹರಿಬಿಟ್ಟಿದ್ದಾರೆ ಕ್ರೂರಿಗಳು. ನೂಪುರ್​ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್​ ಮಾಡಿರುವ ಕಾರಣ ತಾವು ಈ ಕೃತ್ಯ ಮಾಡಿರುವುದಾಗಿ ವಿಡಿಯೋದಲ್ಲಿ ರಾಜಾರೋಷವಾಗಿ ಹೇಳಿಕೊಂಡಿರುವ ಪಾತಕಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಈ ವಿಡಿಯೋ ವೈರಲ್​ ಆಗುತ್ತಲೇ ಕಾರ್ಯನಿರತರಾದ ಪೊಲೀಸರು ತಪ್ಪಿಸಿಕೊಳ್ಳುತ್ತಿದ್ದ ಇಬ್ಬರು ಹಂತಕರನ್ನು ಸೆರೆ ಹಿಡಿದಿದ್ದಾರೆ. ಈ ಪ್ರಕರಣದ ತನಿಖೆ ನಡೆಸುತ್ತಿರುವಾಗಲೇ ತನಿಖಾಧಿಕಾರಿಗಳಿಗೆ ಇವರು ಪಾಕಿಸ್ತಾನದ ಸಂಪರ್ಕ ಹೊಂದಿದ್ದರು ಎನ್ನುವ ವಿಷಯ ಬೆಳಕಿಗೆ ಬಂದಿದೆ. ಆದರೆ ಅಷ್ಟೇ ಅಲ್ಲದೇ, ಕನ್ಹಯ್ಯಾಲಾಲ್​ ಅವರ ಶಿರಚ್ಛೇದನ ಮಾಡಿರುವಂತೆಯೇ ಉದ್ಯಮಿಯೊಬ್ಬರ ಕೊಲೆಗೂ ಸಂಚು ರೂಪಿಸಿರುವ ವಿಷಯ ಇದೀಗ ಬಹಿರಂಗಗೊಂಡಿದೆ.

ಈ ಕುರಿತು ಉದ್ಯಮಿಯವರ ತಂದೆ ಮಾಹಿತಿ ನೀಡಿದ್ದಾರೆ. 'ನನ್ನ ಮಗ ಕೂಡ ನೂಪುರ್​ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್​ ಹಾಕಿದ್ದ. ಟೈಲರ್​ ಕನ್ಹಯ್ಯಲಾಲ್​ ಅವರಂತೆಯೇ ನನ್ನ ಮಗನಿಗೂ ಕೊಲೆ ಬೆದರಿಕೆ ಕರೆಗಳು ಬರುತ್ತಿದ್ದವು. ಆದರೆ ಕನ್ಹಯ್ಯಲಾಲ್​ ಅವರು ಕೆಲ ದಿನ ಅಂಗಡಿಯನ್ನು ಮುಚ್ಚಿ ಪುನಃ ಅಂಗಡಿಯನ್ನು ತೆರೆದರು. ಅಂಗಡಿ ತೆರೆದ ದಿನವೇ ಅವರಿಗಾಗಿ ಹೊಂಚು ಹಾಕಿದ್ದ ಕ್ರೂರಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆದರೆ ನನ್ನ ಮಗ ಹಾಗೆ ಮಾಡಲಿಲ್ಲ. ಕೊಲೆ ಬೆದರಿಕೆ ಬರುತ್ತಲೇ ಊರು ಬಿಟ್ಟು ಹೋದ. ಆದ ಕಾರಣ ಪ್ರಾಣ ಉಳಿಸಿಕೊಂಡಿದ್ದಾನೆ' ಎಂದು ತಂದೆ ಮಾಧ್ಯಮಗಳಿಗೆ ಹೇಳಿದ್ದಾರೆ. ಈ ಬಗ್ಗೆ ತನಿಖಾಧಿಕಾರಿಗಳು ಕೂಡ ಮಾಹಿತಿ ನೀಡಿದ್ದಾರೆ.

ತಮಗೆ ಸಂದೇಹ ಬಂದದ್ದು ಹೇಗೆ ಎಂಬ ಮಾಹಿತಿ ನೀಡಿರುವ ಅವರು, ನನ್ನ ಮಗ ಕೆಲಸಕ್ಕೆಂದು ಅಂಗಡಿಗೆ ಹೋದಾಗಲೆಲ್ಲಾ ಅಪರಿಚಿತರೂ ಅಲ್ಲಿಗೆ ಬರಲು ಶುರು ಮಾಡಿದ್ದರು. ಅವರನ್ನು ನೋಡಿದಾಗ ಮಗನಿಗೆ ಸಂದೇಹ ಬಂದಿದೆ. ಅವರ ವೇಷಭೂಷಣ ನೋಡಿ ಅನುಮಾನ ಶುರುವಾಗಿದೆ. ಅದೇ ವೇಳೆ ಜೀವ ಬೆದರಿಕೆ ಕೂಡ ಬರುತ್ತಿದ್ದರಿಂದ ಮಗ ಅಂಗಡಿಯನ್ನು ಮುಚ್ಚಿದ್ದ. ಯಾಕೋ ವಾತಾವರಣ ಅಷ್ಟು ಸರಿ ಇಲ್ಲ ಎಂದು ಎಣಿಸಿ ಊರನ್ನೇ ಬಿಟ್ಟು ಸ್ವಲ್ಪ ದಿನದ ಮಟ್ಟಿಗೆ ಹೋಗಿದ್ದ ಎಂದು ಅವರು ಹೇಳಿದ್ದಾರೆ.

ಈ ಆರೋಪಿಗಳು ಮಾರ್ಚ್ 30 ರಂದು ಜೈಪುರದಲ್ಲಿ ಸರಣಿ ಸ್ಫೋಟಗಳನ್ನು ನಡೆಸಲು ಉದ್ದೇಶಿಸಿದ್ದ ಸಂಚಿನ ಭಾಗವಾಗಿದ್ದರು ಎಂದು ಕೂಡ ಇದೇ ವೇಳೆ ತಿಳಿದುಬಂದಿದೆ. ಇನ್ನಷ್ಟು ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net