

ಗಾಂಧಿನಗರ (ಗುಜರಾತ್): ದೆಹಲಿ ಮತ್ತು ಪಂಜಾಬ್ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದ ನಂತರ ಭಾರಿ ಹುಮ್ಮಸ್ಸಿನಲ್ಲಿ ಇರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಇದೀಗ ಪ್ರಧಾನಿ ಮೋದಿಯವರ ತವರು ಗುಜರಾತ್ ಚುನಾವಣೆಯ ಮೇಲೆ ಕಣ್ಣು ನೆಟ್ಟಿದ್ದಾರೆ.
ಜನರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಗುಜರಾತ್‌ನ ಶಾಲೆಗಳ ಸ್ಥಿತಿ ನಿಜವಾಗಿಯೂ ಕೆಟ್ಟದಾಗಿದೆ. ಇಲ್ಲಿ ನನಗೆ ಒಂದು ಅವಕಾಶ ಕೊಟ್ಟುನೋಡಿ. ಗುಜರಾತ್ ಶಾಲೆಗಳನ್ನು ಬದಲಾಯಿಸದಿದ್ದರೆ ನನ್ನನ್ನು ಒದ್ದು ಹೊರಕ್ಕೆ ಹಾಕಿ ಎಂದು ಗುಡುಗಿದರು.
ಗುಜರಾತ್‌ನಲ್ಲಿ ಆರು ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಇದರಿಂದ ಲಕ್ಷಾಂತರ ಮಕ್ಕಳ ಭವಿಷ್ಯ ಅವನತಿಯತ್ತ ಸಾಗಿದೆ. ಹಲವಾರು ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ನನ್ನನ್ನು ಗೆಲ್ಲಿಸಿದರೆ ಸಂಪೂರ್ಣ ಚಿತ್ರಣ ಬದಲಾಯಿಸುತ್ತೇನೆ. ದೆಹಲಿಯಲ್ಲಿ 4 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಂದ ದೆಹಲಿ ಸರ್ಕಾರ ನಡೆಸುವ ಶಾಲೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ದೆಹಲಿಯಲ್ಲಿ, ಶ್ರೀಮಂತರು ಮತ್ತು ಬಡವರ ಮಕ್ಕಳು ಒಟ್ಟಿಗೆ ಓದುತ್ತಿದ್ದಾರೆ, ದೆಹಲಿಯಲ್ಲಿ ಈ ಬಾರಿ ಶೇಕಡ 99.7ರಷ್ಟು ಫಲಿತಾಂಶ ಬಂದಿದೆ ಎಂದರು.
ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಕೇಜ್ರಿವಾಲ್, ಪೇಪರ್ ಸೋರಿಕೆಯಾಗದಂತೆ ಒಂದೇ ಪರೀಕ್ಷೆ ನಡೆಸುವಂತೆ ನಾನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಸವಾಲು ಹಾಕುತ್ತೇನೆ ಎಂದು ಸವಾಲು ಎಸೆದರು. ಗುಜರಾತ್‌ನಲ್ಲಿ ಪರೀಕ್ಷೆ ವೇಳೆ ಪೇಪರ್ ಸೋರಿಕೆಯಲ್ಲಿ ಬಿಜೆಪಿ ವಿಶ್ವದಾಖಲೆ ಮಾಡುತ್ತಿದೆ ಎಂದು ಲೇವಡಿ ಮಾಡಿದರು.