ಭಾರತದಿಂದ ಕಾಶ್ಮೀರಿಗಳನ್ನು ಬಚಾವ್‌ ಮಾಡಿ: ಬ್ರಿಟನ್‌ ಸಂಸದೆಯಿಂದ ಪತ್ರ!

sansade
Published on

ಲಂಡನ್: ಭಾರತದ್ದೇ ಭಾಗವಾಗಿರುವ ಕಾಶ್ಮೀರವನ್ನು ಪಾಕಿಸ್ತಾನ ಆಕ್ರಮಿಸಿಕೊಂಡು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಓಕೆ) ಆದರೆ ಬ್ರಿಟನ್‌ ಸಂಸದೆಯೊಬ್ಬರು ಭಾರತ ಆಕ್ರಮಿತ ಕಾಶ್ಮೀರದಿಂದ (ಐಓಕೆ) ಕಾಶ್ಮೀರಿಗಳನ್ನು ಪಾರು ಮಾಡಬೇಕಿದೆ ಎಂದು ಪತ್ರ ಬರೆದಿದ್ದಾರೆ.

ಹೀಗೆಂದು ವಿಚಿತ್ರವಾಗಿರುವ ಪತ್ರ ಬರೆದಿರುವವರು ಬ್ರಿಟನ್‌ನ ಲೇಬರ್ ಪಾರ್ಟಿಯ ಸಂಸದೆ ಜಾರಾ ಸುಲ್ತಾನ್‌. ಈಕೆ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರಿಗೆ ಪತ್ರ ಬರೆದು ಭಾರತದ ಕೈಯಿಂದ ಕಾಶ್ಮೀರಿಗಳನ್ನು ಬಚಾವ್‌ ಮಾಡಲು ಸಹಾಯ ಮಾಡಬೇಕಿದೆ ಎಂದಿದ್ದಾರೆ! ಈ ಸಂಸದೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲದವರು.

ಭಾರತದ ವಿರುದ್ಧ ಅಪಪ್ರಚಾರ ನಡೆಸಲು ಪಾಕಿಸ್ತಾನದಿಂದ ಬ್ರಿಟನ್‌ನ ಕೆಲವು ಸಂಸದರು ಹಣ ಪಡೆದುಕೊಂಡಿರುವುದಾಗಿ ಇತ್ತೀಚೆಗೆ ಭಾರಿ ಚರ್ಚೆಯಾದ ಬೆನ್ನಲ್ಲೇ ಈ ಸಂಸದೆ ಇದೀಗ ಕಾಶ್ಮೀರಿಗಳನ್ನು ಭಾರತೀಯರಿಂದ ರಕ್ಷಿಸಲು ಮುಂದಾಗಿದ್ದಾರೆ! ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಬ್ರಿಟನ್‌ ಸಂಸದರು ರಚಿಸಿಕೊಂಡಿದ್ದ ಸರ್ವಪಕ್ಷೀಯ ಸಂಸದೀಯ ಕಾಶ್ಮೀರ ನಿಯೋಗ (ಎಪಿಪಿಜಿಕೆ) ಪಾಕ್‌ನಿಂದ ಲಂಚ ಪಡೆದಿರುವುದಾಗಿ ವರದಿಯಾಗಿತ್ತು.

ಕಾಶ್ಮೀರದ ಜನರಿಗೆ ನ್ಯಾಯ ಕೊಡಿಸಬೇಕು. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಹಿಂದಕ್ಕೆ ಪಡೆಯುವ ಮೂಲಕ ಅನ್ಯಾಯ ಮಾಡಲಾಗಿದೆ. ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಗೆ ವಹಿಸಲು ಬ್ರಿಟನ್ ಸರ್ಕಾರ ಮುಂದಾಗಬೇಕಿದೆ ಎಂದು ಪತ್ರದಲ್ಲಿ ಬರೆದಿರುವ ಈಕೆ, ನೆರವು ನೀಡುವಂತೆ ಕೋರಿದ್ದಾರೆ.

ಭಾರತ ಆಕ್ರಮಿತ ಕಾಶ್ಮೀರ ಎಂದು ತನ್ನ ಪತ್ರದಲ್ಲಿ ಕರೆದಿದ್ದು 370 ಮತ್ತು 35ಎ ವಿಧಿ ರದ್ದು ಮಾಡಿ ಹಕ್ಕು ಕಸಿದುಕೊಳ್ಳಲಾಗಿದ್ದು ಬ್ರಿಟನ್ ಮಧ್ಯ ಪ್ರವೇಶ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net