

ಶಿವಮೊಗ್ಗ: ವಿಶ್ವ ಪ್ರಸಿದ್ಧ ಜೋಗ ಜಲಪಾತ ವೀಕ್ಷಿಸಲು ರಾಜ್ಯಪಾಲರಾದ ಥಾವರ್ ಚಂದ್ ಗೆಲ್ಹೋಟ್ ಅವರು ನಿನ್ನೆ (ಗುರುವಾರ) ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದರು. ಜೋಗ ಜಲಪಾತದ ಕುರಿತು ಸಾಕಷ್ಟು ಕೇಳಿ ತಿಳಿದುಕೊಂಡಿದ್ದ ರಾಜ್ಯಪಾಲರು ಅದರ ವೀಕ್ಷಣೆಗೆ ಹೋಗಿದ್ದರು. ಹಾಗೆಯೇ ಜಲಪಾತದ ವೀಕ್ಷಣೆಯನ್ನೂ ಮಾಡಿ, ಫೋಟೋ ಕೂಡ ತೆಗೆಸಿಕೊಂಡು ವಾಪಸಾದರು.
ಜಲಪಾತದಿಂದ ಬೀಳುತ್ತಿರುವ ನೀರಿನ ರಾಶಿಯನ್ನು ನೋಡಿ ಸಂತೋಷವೇನೋ ಪಟ್ಟುಕೊಂಡು ವಾಪಸಾದರು. ಆದರೆ ಅಸಲಿಗೆ ಅಲ್ಲಿ ಆಗಿದ್ದೇ ಬೇರೆ! ರಾಜ್ಯಪಾಲರು ಹೋದಾಗ ಜಲಪಾತದಿಂದ ಅಷ್ಟೇನೂ ನೀರು ಬೀಳುತ್ತಿರಲಿಲ್ಲ. ಇದಕ್ಕೆ ಕಾರಣ, ಬೇರೆಯ ಜಲಪಾತಗಳಂತೆ ಜೋಗದ ಜಲಪಾತವಲ್ಲ. ಸಾಮಾನ್ಯವಾಗಿ ಜಲಪಾತಗಳು ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯುತ್ತವೆ. ಆದರೆ ಜೋಗದ ಜಲಪಾತ ಹಾಗಲ್ಲ. ಲಿಂಗನಮಕ್ಕಿ ಆಣೆಕಟ್ಟೆಯ ನೀರನ್ನು ಜಲಪಾತದ ಭಾಗಕ್ಕೆ ನೀರು ಬಿಟ್ಟರಷ್ಟೇ ಅದು ಧುಮ್ಮಿಕ್ಕಿ ಹರಿಯುತ್ತದೆ. ಇಲ್ಲದಿದ್ದರೆ ಸಾಮಾನ್ಯವಾಗಿ ಅಲ್ಲಿ ನೀರಿನ ಹರಿವು ಹೆಚ್ಚಿಗೆ ಇರುವುದಿಲ್ಲ.
ಇಲ್ಲಿ ಅಧಿಕಾರಿಗಳು ದೊಡ್ಡ ಎಡವಟ್ಟು ಮಾಡಿಬಿಟ್ಟಿದ್ದಾರೆ. ರಾಜ್ಯಪಾಲರು ಬರುವ ಸಮಯದಲ್ಲಿ ಜಲಾಶಯದಿಂದ ನೀರು ಬಿಡಲು ಎಲ್ಲಾ ಸಿದ್ಧತೆ ನಡೆಸಲಾಗಿತ್ತು. ಜಲಾಶಯದಿಂದ ನೀರು ಜಲಪಾತಕ್ಕೆ ತಲುಪಿ ಅದು ಧುಮ್ಮಿಕ್ಕಿ ಹರಿಯಲು ಕನಿಷ್ಠ ಎರಡು ಗಂಟೆಗಳಾದರೂ ಬೇಕು. ಆದರೆ ರಾಜ್ಯಪಾಲರ ಭೇಟಿಯ ಅವಧಿಯನ್ನು ಸರಿಯಾಗಿ ಮೊದಲೇ ತಿಳಿದುಕೊಳ್ಳದ ಅಧಿಕಾರಿಗಳು ರಾಜ್ಯಪಾಲರು ಭೇಟಿ ನೀಡುತ್ತಿದ್ದಂತೆಯೇ ನೀರನ್ನು ಬಿಟ್ಟಿದ್ದಾರೆ. ಅದು ಜಲಪಾತಕ್ಕೆ ತಲುಪಿ ಜಲಪಾತದಿಂದ ರಮಣೀಯ ದೃಶ್ಯ ಕಣ್ತುಂಬಿಸಿಕೊಳ್ಳುವ ಮೊದಲೇ ರಾಜ್ಯಪಾಲರು ಭೇಟಿ ನೀಡಿ ವಾಪಸ್ ಹೋಗಿಯಾಗಿದೆ!
ರಾಜ್ಯಪಾಲರು ಬೆಳಗ್ಗೆ 7-30ರ ವೇಳೆಗೆ ಜೋಗ ಜಲಪಾತ ನೋಡಲು ಬಂದಿದ್ದಾರೆ. ಆ ವೇಳೆಗೆ ಅವರಿಗೆ ಕಂಡದ್ದು ಮಾಮೂಲಿಯಂತಿರುವ ಕ್ಷೀಣಿಸುವ ಜಲಪಾತವೇ. ಅದರ ಬಗ್ಗೆ ಅರಿವಿಲ್ಲದ ರಾಜ್ಯಪಾಲರು ಅಷ್ಟಕ್ಕೇ ಖುಷಿಪಟ್ಟು ಹೋಗಿದ್ದಾರೆ! ಅವರು ಅತ್ತ ಹೋಗುತ್ತಿದ್ದಂತೆಯೇ ಎಂಟು ಗಂಟೆಗೆ ಲಿಂಗನಮಕ್ಕಿ ಆಣೆಕಟ್ಟೆಯ ನೀರು ಬಂದು ಜಲಪಾತ ಧುಮ್ಮಿಕ್ಕಿ ಹರಿದಿದೆ! ಆದರೆ ಅದನ್ನು ಕಣ್ತುಂಬಿಸಿಕೊಳ್ಳುವ ಭಾಗ್ಯ ರಾಜ್ಯಪಾಲರಿಗೆ ಸಿಗಲಿಲ್ಲ ಎಂದು ತಿಳಿದುಬಂದಿದೆ.