ಸಾರ್ವಜನಿಕ ಸಂಪರ್ಕ ಕ್ಷೇತ್ರದ ವಿವಿಧ ಮಜಲುಗಳನ್ನು ತೆರೆದಿಡುವ ಜಯಪ್ರಕಾಶ ಪುತ್ತೂರು ಅವರ 'ಹಮಾರಾ ಪಿಆರ್​ಓ'

book
Published on

ಬೆಂಗಳೂರು: ಡಿ.ಆರ್.ಡಿ.ಓ. ಸೇರಿದಂತೆ ಐದು ಪ್ರತಿಷ್ಠಿತ ಸಂಸ್ಥೆಗಳ ಸಾರ್ವಜನಿಕ ಸಂಪರ್ಕ ಅಧಿಕಾರಿ ಅರ್ಥಾತ್ ಪಿಆರ್​ಓ ಆಗಿ ನಾಲ್ಕು ದಶಕಗಳ ಸೇವೆ ಸಲ್ಲಿಸಿರುವ ಜಯಪ್ರಕಾಶ ಪುತ್ತೂರು ಅವರ ಅನುಭವ ಕಥನವೊಂದು ಬಿಡುಗಡೆಗೆ ಸಿದ್ಧವಾಗಿದೆ. "ಹಮಾರಾ PRO"​ ಶೀರ್ಷಿಕೆಯ ಈ ಪುಸ್ತಕ, ಪಿಆರ್​ ರಂಗದಲ್ಲಿ ಎದುರಾಗುವ ಸವಾಲುಗಳು ಮತ್ತು ಅವುಗಳನ್ನು ನಿಭಾಯಿಸಲು ಬೇಕಾದ ಮನೋಧರ್ಮ, ಸಿದ್ಧತೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ.

ಭಾರತದ ರಾಷ್ಟ್ರಪತಿ ಹಾಗೂ ಡಿಆರ್​ಡಿಓ ಮುಖ್ಯಸ್ಥರಾಗಿದ್ದ ಅಬ್ದುಲ್ ಕಲಾಂರನ್ನು ವಿಮಾನದಿಂದ ಇಳಿಸಲು ಏಣಿ ಹುಡುಕಾಡಿದ ವಿಚಿತ್ರ ಸನ್ನಿವೇಶವೂ ಸೇರಿದಂತೆ ಹಲವು ಸ್ವಾರಸ್ಯಕರ ಘಟನೆಗಳನ್ನು ಜೆಪಿ ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಂ, ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್​ ಮತ್ತು ಹಲವಾರು ಹಿರಿಯ ವಿಜ್ಞಾನಿಗಳೊಂದಿಗಿನ ತಮ್ಮ ಒಡನಾಟದ ಕ್ಷಣಗಳನ್ನು ರಸವತ್ತಾಗಿ ಚಿತ್ರಿಸಿದ್ದಾರೆ.

ಸಾರ್ವಜನಿಕ ಸಂಪರ್ಕ ಕ್ಷೇತ್ರವನ್ನು ಎಲ್ಲರೊಳಗೊಂದಾಗಿ ಬದುಕುವ 'ಜೀವನಧರ್ಮ' ಎಂದು ಕರೆಯುವ ಜೆಪಿ ಎಂದೇ ಜನಪ್ರಿಯರಾಗಿರುವ ಜಯಪ್ರಕಾಶ್ ಅವರ 40 ಕಿರುಬರಹಗಳ ಸಂಕಲನವಿದು. ಇವರು ಈ ಮುನ್ನ ಬರೆದ 'ಅಗ್ನಿಯ ರೆಕ್ಕೆಗಳು', 'ಶಿಶು ಸಾಹಿತ್ಯ - ಡಾ. ಅಬ್ದುಲ್ ಕಲಾಂ', 'ಕಲಾಂ ಜೀವನ ಧರ್ಮ' ಕೃತಿಗಳು ಈಗಾಗಲೇ ಹಲವು ಬಾರಿ ಮರುಮುದ್ರಣ ಕಂಡಿರುವ ಪುಸ್ತಕಗಳು.

ಬ್ಯಾಂಕಿನ ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕೆಲಸ ಆರಂಭಿಸಿದ ಜೆಪಿ, ನಂತರ ವೈಮಾನಿಕ ಅಭಿವೃದ್ಧಿ ಸಂಸ್ಥೆ(ಎಡಿಎ) ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್​ಡಿಓ)ಗಳಲ್ಲಿ ಪೂರ್ಣ ಪ್ರಮಾಣದ ಪಿಆರ್​ಓ ಆಗಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿ ನಂತರವೂ ಪೊಲೀಸ್ ಇಲಾಖೆಗೆ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪಿ.ಆರ್.ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಯುವಜನರಿಗೆ ಪ್ರೇರಣಾದಾಯಕವೂ ಮಾರ್ಗದರ್ಶಕವೂ ಆಗಬಲ್ಲ ಈ ಪುಸ್ತಕದಲ್ಲಿ ಜೆಪಿ "ಎಲ್ಲರ ಮಿತ್ರನಾಗಿ ಸರ್ವರ ಸುಖ ಬಯಸುವ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ" ಕಾರ್ಯನಿರ್ವಹಿಸುವ ಬಗೆಯನ್ನು ತೆರೆದಿಟ್ಟಿದ್ದಾರೆ.

ಸಪ್ನಾ ಬುಕ್ ಹೌಸ್​ ಪ್ರಕಟಿಸಿರುವ "ಹಮಾರಾ ಪಿಆರ್​ಓ" ಪುಸ್ತಕದ ಬಿಡುಗಡೆ ಸಮಾರಂಭವು ಶನಿವಾರ (ಜನವರಿ 16) ಬೆಳಿಗ್ಗೆ 11 ಕ್ಕೆ ಬೆಂಗಳೂರಿನ ಚಿತ್ರ ಕಲಾ ಪರಿಷತ್​ನಲ್ಲಿ ನಡೆಯಲಿದೆ. ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ(ಪಿಆರ್​ಸಿಐ)ದ ರಾಜ್ಯ ಘಟಕವು ಆಯೋಜಿಸಿರುವ ಈ ಸಮಾರಂಭದಲ್ಲಿ ಹೆಚ್ಚುವರಿ ಸಾರಿಗೆ ಆಯುಕ್ತರಾದ ಶಿವರಾಜ್ ಪಾಟೀಲ್, ವಿಮರ್ಶಕ ಹಾಗೂ ಇಂಟೆಲ್​ನ ಮಾಜಿ ನಿರ್ದೇಶಕರಾದ ಎಸ್.ಆರ್.ವಿಜಯಶಂಕರ್, ಡಿ.ಆರ್​.ಡಿ.ಓ. ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ, ಪಿಆರ್​ಸಿಐನ ಎಂ.ಬಿ.ಜಯರಾಮ್ ಭಾಗವಹಿಸಲಿದ್ದಾರೆ. ಶಿಕ್ಷಣತಜ್ಞ ಪ್ರೋ. ಕೆ.ಈ.ರಾಧಾಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net