

ನವದೆಹಲಿ : ಕಳೆದ ಎರಡು ವರ್ಷಗಳಿಂದ ಆದಾಯ ತೆರಿಗೆಯನ್ನು ಪಾವತಿ ಮಾಡದೇ ಸುಮ್ಮನೇ ಕುಳಿತಿರುವಿರಾ? ಹಾಗಿದ್ದರೆ ನೀವು ಈ ಬಾರಿ ಎರಡು ಪಟ್ಟು ಹೆಚ್ಚಿಗೆ ಟಿಡಿಎಸ್ Tax Deducted At Source (TDS) ಕಟ್ಟಬೇಕಾಗುತ್ತದೆ.
ಈ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ನೀಡಿದೆ. ಟಿಡಿಎಸ್ ಕಡಿತಕ್ಕೆ ಕೇಂದ್ರ ಸರ್ಕಾರ ಹೊಸದಾಗಿ 206ಎ ಬಿ ಎಂಬ ಸೆಕ್ಷನ್ ಸೇರಿಸಿದೆ. ಇದರ ಅನ್ವಯ ಕಳೆದ ಎರಡು ವರ್ಷದಿಂದ ಆದಾಯ ತೆರಿಗೆ (ಐಟಿಆರ್) ಸಲ್ಲಿಸದೇ ಇರುವವರಿಂದ ದುಪ್ಪಟ್ಟು ಟಿಡಿಎಸ್ ಕಡಿತಗೊಳಿಸಲಾಗುವುದು ಎಂದಿದ್ದಾರೆ.
ಯಾವ ಆದಾಯ ತೆರಿಗೆದಾರನ ಟಿಡಿಎಸ್ ಕಡಿತವು 50 ಸಾವಿರ ರೂಪಾಯಿಗಿಂತಲೂ ಹೆಚ್ಚಾಗಿರುವುದೋ ಅಂಥವರಿಗೆ ಈ ಆದೇಶ ಅನ್ವಯ ಆಗಲಿದೆ. ಒಂದು ವೇಳೆ ಈ ಎರಡು ವರ್ಷಗಳಿಂದ ಟಿಡಿಎಸ್ ಅನ್ನು ಕ್ಲೇಮ್ ಮಾಡಿಕೊಳ್ಳದೇ ಇದ್ದರೆ, ಅವರ ಸಂಬಳದಿಂದ ಎರಡು ಪಟ್ಟು ಹೆಚ್ಚು ಟಿಡಿಎಸ್ ಕಡಿತ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆದಾಯ ತೆರಿಗೆ ಪಾವತಿಗೆ ಮೊದಲು ಮಾರ್ಚ್ 31ರವರೆಗೆ ಗಡುವು ಇತ್ತು ನಂತರ ಅದನ್ನು ಮೇ 31ರ ವರೆಗೆ ವಿಸ್ತರಿಸಲಾಗಿತ್ತು. ಕರೊನಾ ಹಿನ್ನೆಲೆಯಲ್ಲಿ ಇದನ್ನು ಜೂನ್ 30ಕ್ಕೆ ವಿಸ್ತರಿಸಲಾಗಿತ್ತು. ಇಷ್ಟು ಅವಧಿಯವರೆಗೆ ವೇಳೆ ಕೊಟ್ಟರೂ ಆದಾಯ ತೆರಿಗೆ ಪಾವತಿ ಮಾಡದೇ ಹೋದವರಿಗೆ ಇಂಥದ್ದೊಂದು ನಿಯಮ ಅನ್ವಯ ಆಗಲಿದೆ. ಈ ನಿಯಮ ಕಂಪೆನಿ, ವ್ಯಕ್ತಿ, ಸಂಸ್ಥೆ ಎಲ್ಲರಿಗೂ ಅನ್ವಯ ಆಗಲಿದೆ.
ಇದೇ ವೇಳೆ ಆದಾಯ ತೆರಿಗೆಯನ್ನು ಪಾವತಿಸಲು ಆನ್‌ಲೈನ್ ಪೋರ್ಟಲ್ ಅನ್ನು ಕೇಂದ್ರ ಸರ್ಕಾರ ಇನ್ನಷ್ಟು ಸರಳೀಕರಣಗೊಳಿಸಿದೆ.