

ಹುಬ್ಬಳ್ಳಿ: ಹುಬ್ಬಳ್ಳಿ ಮತ್ತು ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಇರುವ ಕಾನೂನು ಸಮರಕ್ಕೆ ತೆರೆ ಬಿದ್ದಿದೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಕರ್ನಾಟಕ ಹೈಕೋರ್ಟ್ನ ಧಾರವಾಡದ ಪೀಠವು ಅನುಮತಿ ನೀಡಿದ್ದರೆ, ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಉತ್ಸವ ಆಚರಣೆಗೆ ಸುಪ್ರೀಂಕೋರ್ಟ್ ಅನುಮತಿ ನೀಡಲಿಲ್ಲ.
ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಸದ್ಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ಹೇಳಿದ್ದರೆ, ಧಾರವಾಡದ ಕೋರ್ಟ್, ಗಣೇಶನನ್ನು ಕುಳ್ಳರಿಸುವ ಬಗ್ಗೆ ನಿರ್ಧರಿಸುವ ಅಧಿಕಾರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಇರುವುದಾಗಿ ಹೇಳಿದೆ. ಆಯುಕ್ತರು ಗಣೇಶೋತ್ಸವಕ್ಕೆ ಇದಾಗಲೇ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ವಿವಾದ ಇಲ್ಲಗೆ ಮುಗಿದಂತೆ ಕಾಣಿಸುತ್ತಿಲ್ಲ. ಸುಪ್ರೀಂಕೋರ್ಟ್ ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಗಣೇಶನನ್ನು ಕುಳ್ಳರಿಸಲು ಅನುಮತಿ ನೀಡದೇ ಇರುವಾಗ ರಾಜ್ಯ ಹೈಕೋರ್ಟ್ ಹುಬ್ಬಳ್ಳಿಯಲ್ಲಿ ನೀಡಿರುವುದು ಸರಿಯಲ್ಲ ಎಂದು ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆ ಪುನಃ ಈಗ ಹೈಕೋರ್ಟ್ ಮೆಟ್ಟಿಲೇರಿದೆ.
ಸುಪ್ರೀಂ ಕೋರ್ಟ್ ಆದೇಶ ಹುಬ್ಬಳ್ಳಿ ಈದ್ಗಾಗೂ ಅನ್ವಯಿಸಲು ಅದರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ನಮಗೂ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸುವಂತೆ ಮನವಿ ಸಲ್ಲಿಸಲಾಗಿದೆ. (ದಿಗ್ವಿಜಯ ನ್ಯೂಸ್)