ಕೆಜಿಎಫ್-2 ವೀಕ್ಷಣೆ ವೇಳೆ ಶೂಟ್‌ಔಟ್‌: ಹಾವೇರಿಯಲ್ಲಿ ನಡೆದ ಭಯಾನಕ ಘಟನೆಯ ಆರೋಪಿ ಕೊನೆಗೂ ಅರೆಸ್ಟ್‌

haveri
Published on

ಹಾವೇರಿ: ಹಾವೇರಿ ಜಿಲ್ಲೆ ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಕೆಜಿಎಫ್-2 ಚಿತ್ರ ವೀಕ್ಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ನಡೆದ ಚಿಕ್ಕದೊಂದು ಘಟನೆಯಿಂದ ಮಾತಿನ ಚಕಮಕಿ ನಡೆದು, ಗುಂಡು ಹಾರಿಸಿ ಪರಾರಿಯಾಗಿದ್ದವ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಕಳೆದ ಏಪ್ರಿಲ್‌ 19ರ ರಾತ್ರಿ 10 ಗಂಟೆಗೆ ಈ ಘಟನೆ ನಡೆದಿತ್ತು.

ಶೂಟ್ ಮಾಡಿದ ಬಳಿಕ ತಲೆಮರೆಸಿಕೊಂಡಿದ್ದ ಈತ ಪೊಲೀಸರ ಬಲೆಗೆ ಬಿದ್ದಿರಲಿಲ್ಲ. ಇದೀಗ ತಿಂಗಳ ಬಳಿಕ ಅಂತೂ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಏನಿದು ಘಟನೆ?

ಏಪ್ರಿಲ್‌ 19ರ ರಾತ್ರಿ 10 ಗಂಟೆಗೆ ಕೆಜಿಎಫ್‌-02 ಚಿತ್ರ ವೀಕ್ಷಿಸುತ್ತಿದ್ದಾಗ ಮುಗಳಿ ಗ್ರಾಮದ ವಸಂತ್ ಕುಮಾರ್ ಎನ್ನುವವರ ಮೇಲೆ ಗುಂಡು ಹಾರಿಸಲಾಗಿತ್ತು. ಗುಂಡಿನ ಶಬ್ದ ಕೇಳಿ ಚಿತ್ರಮಂದಿರ ಹಾಗೂ ಸಮೀಪ ಇದ್ದವರೆಲ್ಲಾ ಬೆಚ್ಚಿಬಿದ್ದಿದ್ದರು. ವಸಂತ್‌ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅವರ ಹೊಟ್ಟೆ ಮತ್ತು ಕಾಲಿಗೆ ಗುಂಡು ತಗುಲಿ ಗಾಯಗಳಾಗಿದ್ದವು.

ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊನೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ನಡೆದ ಸಮಯದಲ್ಲಿ ತುಂಬಾ ಕತ್ತಲು ಇದ್ದದ್ದರಿಂದ ಪೊಲೀಸರಿಗೆ ಆರೋಪಿಯನ್ನು ಗುರುತಿಸುವುದು ಕಷ್ಟವಾಗಿತ್ತು. ಆದರೆ ಗುಂಡು ಹಾರಿಸಿವ ಶಿಗ್ಗಾವಿಯ ಮಂಜುನಾಥ್ ಅಲಿಯಾಸ್ ಸಂತೋಷ್ ಅಲಿಯಾಸ್ ಮಲ್ಲಿಕ್ ಪಾಟೀಲ್ ಎಂದು ತಿಳಿದುಬಂದಿತ್ತು.

ತನ್ನ ಗುರುತು ಪತ್ತೆಯಾಯಿತು ಎಂದು ತಿಳಿಯುತ್ತಲೇ ಮಂಜುನಾಥ್‌ ಗೋವಾ, ಮಹಾರಾಷ್ಟ್ರ ಸೇರಿದಂತೆ ಕೆಲವು ಕಡೆ ತಲೆಮರೆಸಿಕೊಳ್ಳಲು ಶುರು ಮಾಡಿದ್ದ. ಅಂತೂ ಈಗ ಕಾರವಾರ ಜಿಲ್ಲೆ ಮುಂಡಗೋಡ ಬಸ್ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಈತನಿಗೆ ಒಂದು ಗನ್, ಹದಿನೈದು ಜೀವಂತ ಗುಂಡುಗಳು, ಎರಡು ಖಾಲಿ ಕೋಕಾ, ಒಂದು ಸ್ಕೂಟಿ ಹಾಗೂ ಒಂದು ಮೊಬೈಲ್ ಜಪ್ತಿ ಮಾಡಿದ್ದಾರೆ. ಈತನಿಗೆ ಪರಾರಿಯಾಗಲು ನೆರವು ನೀಡಿದ್ದ ಬಂಕಾಪುರದ ಇಸ್ಮಾಯಿಲ್ ಎಂಬಾತನೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಶೂಟ್‌ ಔಟ್‌ ಯಾಕೆ?
ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸುತ್ತಿದ್ದ ವಸಂತ್ ಕುಮಾರ್ ಹಾಗೂ ಆತನ ಸ್ನೇಹಿತರು ಮುಂದಿನ ಸೀಟು ಖಾಲಿ ಇದ್ದುದರಿಂದ ಅದರ ಮೇಲೆ ಕಾಲಿಟ್ಟಿದ್ದರು. ಅದನ್ನು ತೆಗೆಯುವಂತೆ ಮಂಜುನಾಥ್‌ ಹೇಳಿದ್ದ. ಆದರೆ ಇವರು ಕೇಳಿರಲಿಲ್ಲ. ಇದೇ ಕಾರಣಕ್ಕೆ ಮಾತಿನ ಚಕಮಕಿಯಾಗಿತ್ತು. ಇದಾದ ಬಳಿಕ ಮಂಜುನಾಥ್ ಕೆಲವು ನಿಮಿಷಗಳ ಕಾಲ ಚಿತ್ರಮಂದಿರದಿಂದ ಹೊರಗೆ ಹೋಗಿ ಮತ್ತೆ ಒಳಗೆ ಬಂದು ವಸಂತ್ ಕುಮಾರ್ ಮೇಲೆ ಗುಂಡು ಹಾರಿಸಿ ಪರಾಯಾಗಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net