

ನವದೆಹಲಿ: 'ಅದು 1999. ಆಗಿನ್ನೂ ನರೇಂದ್ರ ಮೋದಿಯವರು ಗುಜರಾತ್ನ ಮುಖ್ಯಮಂತ್ರಿ ಕೂಡ ಆಗಿರಲಿಲ್ಲ. ಆಗ ಅವರು, ಹರಿಯಾಣದ ಬಿಜೆಪಿ ಸಾಂಸ್ಥಿಕ ಉಸ್ತುವಾರಿಯಾಗಿದ್ದರು ಅಷ್ಟೇ. ಆಗ ಗುರುಗ್ರಾಮದ ಲೋಕಸಭಾ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯ ಹುಡುಕಾಟ ನಡೆಸಿತ್ತು. ಯಾವುದೇ ರಾಜಕೀಯ ಹಿನ್ನೆಲೆಯೂ ಇಲ್ಲದ, ಭಾರತಕ್ಕಾಗಿ ಹುತಾತ್ಮನಾಗಿರುವ ಯೋಧನ ಪತ್ನಿಗಾಗಿ ಹುಡುಕಾಟ ನಡೆಸಿದ್ದರು. ನಂತರ ಸಿಕ್ಕವಳೇ ನಾನು' ಎಂದು ಎರಡು ದಶಕಗಳ ಹಿಂದಿನ ರೋಚಕ ಅನುಭವವನ್ನು ಬಿಚ್ಚಿಟ್ಟವರು ಡಾ. ಸುಧಾ ಯಾದವ್.
ಬಿಜೆಪಿಯ ಸಂಸದೀಯ ಮಂಡಳಿಯಲ್ಲಿ ನಿನ್ನೆಯಷ್ಟೇ ಸ್ಥಾನ ಗಿಟ್ಟಿಸಿಕೊಂಡಿರುವ 57 ವರ್ಷದ ಮಾಜಿ ಸಂಸದೆ ಡಾ.ಸುಧಾ ಯಾದವ್ ತಾವು ರಾಜಕೀಯ ಪ್ರವೇಶಿಸಿದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 'ನನಗೆ ಯಾವುದೇ ರಾಜಕೀಯ ಹಿನ್ನೆಲೆ ಅಥವಾ ಹಣಬಲ ಇರಲಿಲ್ಲ. ಆದ್ದರಿಂದ ನನಗೆ ಪ್ರಚಾರ ನಡೆಸುವುದು ಅಷ್ಟು ಸುಲಭವಾಗಿರಲಿಲ್ಲ. ನನ್ನ ಪರವಾಗಿ ಪ್ರಚಾರಕ್ಕಾಗಿ ಹಣದ ಅವಶ್ಯಕತೆಯಿತ್ತು. ದೇಣಿಗೆ ಸಂಗ್ರಹಿಸಬೇಕಿತ್ತು. ದಿಕ್ಕೆಟ್ಟು ಹೋಗಿದ್ದ ನನ್ನ ಪಾಲಿಗೆ ದೇವರಾಗಿ ಬಂದದ್ದು ನರೇಂದ್ರ ಮೋದಿಯವರು. ಅವರನ್ನು ನಾನು ಅಣ್ಣ ಎಂದೇ ಸಂಬೋಧಿಸುತ್ತೇನೆ. ಆಗಿನ್ನು ಮುಖ್ಯಮಂತ್ರಿಯೂ ಆಗಿರದ ಮೋದಿಯವರು ದೇಣಿಗೆ ಕಾರ್ಯಕ್ಕೆ ಮುನ್ನುಡಿ ಹಾಡಿದರು.
ಅವರು ಆಗ ಬಿಜೆಪಿಯ ಪದಾಧಿಕಾರಿ ಅಷ್ಟೇ ಆಗಿದ್ದರು. ಹೀಗಾಗಿ ಅವರ ಖರ್ಚು ವೆಚ್ಚಗಳನ್ನು ಸಂಘಟನೆಯೇ ನೋಡಿಕೊಳ್ಳುತ್ತಿತ್ತು. ನರೇಂದ್ರ ಮೋದಿ ಅವರ ಬಳಿ ಯಾವುದೇ ಹಣ ಇರುತ್ತಿರಲಿಲ್ಲ. ಆದರೂ ಅವರು ರೂ. 11 ನೀಡಿದ್ದರು. ಅದೂ ಅವರಮ್ಮ ಹೀರಾಬೆನ್ ನೀಡಿದ ಹಣ. ತಮ್ಮ ತಾಯಿ ನೀಡಿದ ಹಣವನ್ನೇ ಬಿಜೆಪಿ ಅಭ್ಯರ್ಥಿಯ ಪ್ರಚಾರಕ್ಕೆ ಎಂದು ಅವರು ದೇಣಿಗೆ ನೀಡಿದ್ದರು, ಎಂಥ ವ್ಯಕ್ತಿತ್ವ ಅವರದ್ದು ಎಂದು ಸುಧಾ ಕೊಂಡಾಡಿದ್ದಾರೆ.
ಆ ದಿನವನ್ನು ನಾನು ಎಂದಿಗೂ ಮರೆಯಲಾರೆ. ಅವರ ತಾಯಿ ನೀಡಿದ್ದ 11 ರೂಪಾಯಿಗಳನ್ನು ನನಗೆ ನೀಡಿದ ಅವರು, ತಂಗಿ ಈ ಹಣವನ್ನು ಜೋಪಾನವಾಗಿ ಕಾಪಾಡಿಕೋ. ಇದನ್ನು ಸದುಪಯೋಗ ಪಡಿಸಿಕೊಳ್ಳು ಎಂದು ಹೇಳಿದರು. ನನಗೆ ಇಂದಿಗೂ ನಂಬುವುದು ಕಷ್ಟವೇ ಆಗಿಬಿಟ್ಟಿದೆ. ಅದೇನೆಂದರೆ, ಮೋದಿಯವರು ಆ 11 ರೂಪಾಯಿ ನೀಡಿದ ಅರ್ಧ ಗಂಟೆಯಲ್ಲಿಯೇ ಏಳೂವರೆ ಲಕ್ಷ ರೂಪಾಯಿ ನನಗೆ ಸೇರಿತು. ಅವರು ಪ್ರಚಾರಕ್ಕೆ ಮುನ್ನುಡಿ ಬರೆದದ್ದೇ ತಡ, ನನಗೆ ದೇಣಿಗೆ ನೀಡಲು ಹಲವರು ಮುಂದೆ ಬಂದರು. ಅರ್ಧ ಗಂಟೆಯಲ್ಲಿಯೇ ಏಳೂವರೆ ಲಕ್ಷ ರೂಪಾಯಿ ಸಂಗ್ರಹವಾಯಿತು' ಎಂದು ಸುಧಾ ಗದ್ಗಿತರಾದರು.
ಆ ಕ್ಷಣವನ್ನು ನಾನು ಎಂದಿಗೂ ಮರೆಯಲಾರೆ. ಹುತಾತ್ಮ ಯೋಧನ ಪತ್ನಿಯಾಗಿ ರಾಜಕೀಯರ ಲವಶೇಷವೂ ಗೊತ್ತಿರದ ನಾನು ಬಿಜೆಪಿ ಸಂಸದೆಯನ್ನಾಗಿ ಮಾಡಿರುವ ಪಕ್ಷ ಹಾಗೂ ಅಂದು ನನಗೆ 11 ರೂಪಾಯಿ ನೀಡಿ, ನನಗೆ ಪ್ರೋತ್ಸಾಹಿಸಿದ ನನ್ನಣ್ಣ ನರೇಂದ್ರ ಮೋದಿಯವರ ಸಹಾಯವನ್ನು ಎಂದಿಗೂ ಮರೆಯಲಾರೆ ಎಂದಿದ್ದಾರೆ ಸುಧಾ. (ಏಜೆನ್ಸೀಸ್)