ಶಿವಮೊಗ್ಗದ ‘ಹಿಂದೂ ಹುಲಿ’ ಹರ್ಷ- ರಾಣೆಬೆನ್ನೂರಿನ ಮಿಂಚಿನ ಓಟದ ಹೋರಿ ‘ರಾಜಾ‘: ಇದ್ಯಾವ ಜನುಮದ ಅನುಬಂಧವೋ

harsha1
Published on

ಹಾವೇರಿ: ಕಳೆದ ಫೆಬ್ರುವರಿಯಲ್ಲಿ ಶಿವಮೊಗ್ಗದಲ್ಲಿ ಕೊಲೆಯಾದ ‘ಹಿಂದೂ ಹುಲಿ’ ಎಂದೇ ಖ್ಯಾತಿ ಪಡೆದ ಬಜರಂಗದಳದ ಯುವ ಕಾರ್ಯಕರ್ತ ಹರ್ಷನಿಗೂ, ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಈ ಹೋರಿಗೂ ಅದೆಂಥ ಭಾವನಾತ್ಮಕ ಸಂಬಂಧವಯ್ಯಾ ಎನ್ನುವ ಮನಮಿಡಿಯುವ ಘಟನೆಯಿದು...

ರಾಣೆಬೆನ್ನೂರಿನ ಕುರುಬಗೇರಿಯ ಬುರಡಿಕಟ್ಟಿಯವರ ಕುಟುಂಬಸ್ಥರು ಕಳೆದ ಡಿಸೆಂಬರ್‌ನಲ್ಲಿ ತಮಿಳುನಾಡಿನ ಕೃಷ್ಣಗಿರಿಯಿಂದ ಒಂಬತ್ತು ಲಕ್ಷ ರೂಪಾಯಿ ಕೊಟ್ಟು ಒಂದು ಹೋರಿಯನ್ನು ಖರೀದಿ ಮಾಡಿದ್ದರು. ಅದನ್ನು ತಮ್ಮ ಮನೆಮಗನಂತೆಯೇ ಇವರು ಸಲಹುತ್ತಿದ್ದರು. ಅದಕ್ಕೆ ’ರಾಣೆಬೆನ್ನೂರ್‌ ಕಾ ರಾಜಾ’ ಎಂದು ನಾಮಕರಣ ಮಾಡಿದ್ದರು. ಈ ಹೋರಿಯನ್ನು ವಿವಿಧ ಸ್ವರ್ಧೆಗಳಿಗೆ ಕಳುಹಿಸುವ ಸಲುವಾಗಿ ಕುಟುಂಬಸ್ಥರು ಅದನ್ನು ತಯಾರಿಗೊಳಿಸಿದ್ದರು.

ಆದರೆ ಈ ’ರಾಣೆಬೆನ್ನೂರ್‌ ಕಾ ರಾಜಾ’ ಮಾತ್ರ ಯಾವುದೇ ಸ್ಪರ್ಧೆಯಲ್ಲಿ ಗೆಲುವು ಸಾಧಿಸಲಿಲ್ಲ. ಅಖಾಡಕ್ಕಿಳಿದ ಹೋರಿ ಬರಿಗೈಯಲ್ಲಿ ವಾಪಸಾಗುತ್ತಿತ್ತು. ಆದರೆ ನಂತರ ನಡೆದದ್ದೇ ಬಲು ಕುತೂಹಲ.

ಹಿಂದೂ ಕಾರ್ಯಕರ್ತ ಹರ್ಷ ಅವರ ಅಭಿಮಾನಿಯಾಗಿದ್ದರು ಈ ಕುಟುಂಬಸ್ಥರು. ಫೆಬ್ರುವರಿಯಲ್ಲಿ ಹರ್ಷ ಅವರು ಬರ್ಬರವಾಗಿ ಕೊಲೆಯಾದ ಬಳಿಕ, ಕಂಬನಿ ಮಿಡಿದ ಲಕ್ಷಾಂತರ ಮಂದಿಯ ಪೈಕಿ ಈ ಕುಟುಂಬಸ್ಥರೂ ಒಬ್ಬರು. ಹರ್ಷದ ನೆನಪಿಗಾಗಿ ತಾವು ಮಗನಂತೆ ಸಾಕಿರುವ ಈ ಹೋರಿಗೆ ಹರ್ಷ ಎಂದೇ ಕರೆಯತೊಡಗಿದ್ದರು.

ಹರ್ಷನ ಹೆಸರು ಹೇಳಿ ಹೋರಿಯನ್ನು ಸ್ಪರ್ಧೆಯೊಂದಕ್ಕೆ ಕಳುಹಿಸಿದ್ದರು ಕುಟುಂಬಸ್ಥರು. ಅದೇನು ಪವಾಡವೋ ಗೊತ್ತಿಲ್ಲ. ಹೋರಿ ಈ ಹಿಂದಿನಂತೆ ಇರಲಿಲ್ಲ ಎನ್ನುತ್ತಾರೆ ಕುಟುಂಬದವರು. ‘ಅದೇನು ಲೀಲೆಯೊ ಗೊತ್ತಿಲ್ಲ. ಹರ್ಷನ ಹೆಸರು ಹೇಳುತ್ತಲೇ ಅಖಾಡಕ್ಕಿಳಿದ ಮೊದಲ ದಿನವೇ ಬಂಗಾರದ ಉಂಗುರವನ್ನು ಬಹುಮಾನವಾಗಿ ಪಡೆಯಿತು ನಮ್ಮ ಹೋರಿ. ಅಲ್ಲಿಂದ ಅದರ ಬಹುಮಾನದ ಸರಣಿ ನಿಂತೇ ಇಲ್ಲ. ಭಾಗವಹಿಸಿದ ಸ್ಪರ್ಧೆಗಳಲ್ಲಿ ಇಲ್ಲೀವರೆಗೆ ಒಂದು ಬೈಕ್, 3 ಬಂಗಾರದ ಉಂಗುರ, ಒಂದು ಬಂಗಾರ ಲಾಕೆಟ್, ಒಂದು ಎತ್ತಿನ ಚಕ್ಕಡಿ, ಒಂದು ಕಪ್‌ಬೋರ್ಡ್‌ ಸೇರಿದಂತೆ ಹಲವಾರು ಬಹುಮಾನಗಳನ್ನು ಪಡೆದಿದೆ’ ಎನ್ನುತ್ತಾರೆ ಹೋರಿಯ ಮಾಲೀಕರು.

ಈ ವಿಷಯವನ್ನು ಅವರು ಹರ್ಷನ ಕುಟುಂಬದವರಿಗೂ ಮುಟ್ಟಿಸಿದ್ದಾರೆ. ಹರ್ಷನ ಕುಟುಂಬದವರ ಹರುಷಕ್ಕೆ ಪಾರವೇ ಇಲ್ಲವಾಗಿದೆ. ಹೋರಿಯನ್ನು ನೋಡಲು ಹರ್ಷನ ತಾಯಿ, ಅಕ್ಕ, ತಂಗಿ, ಸಹೋದರರು, ಸಂಬಂಧಿಕರು ಹಾಗೂ ಸ್ನೇಹಿತರು ರಾಣೇಬೆನ್ನೂರಿನ ಕುರುಬಗೇರಿಯ ಬುರಡಿಕಟ್ಟಿಯವರ ಮನೆಗೆ ಭೇಟಿ ಕೊಟ್ಟು ಸಂತಸ ವ್ಯಕ್ತಪಡಿಸಿದ್ದಾರೆ. ಹರ್ಷನನ್ನು ನಾವು ಇಂದು ಜೀವಂತವಾಗಿ ನೊಡಿದಂತಾಯಿತು ಎಂದು ಭಾವುಕರಾಗಿ ನುಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net