ಕೂದಲು ನೇರಮಾಡಲು ಯೂಟ್ಯೂಬ್‌ ಮೊರೆ ಹೋಗಿ ಬೆಂಕಿಯಲ್ಲಿ ಬೆಂದು ಹೋದ ಬಾಲಕ!

hair
Published on

ತಿರುವನಂತಪುರ: ಈಗ ಹೆಣ್ಣುಮಕ್ಕಳಿಗೆ ಮಾತ್ರವಲ್ಲದೇ ಹುಡುಗರಿಗೂ ಹೇರ್‌ಸ್ಟೈಲ್‌ ಹುಚ್ಚು ಹೆಚ್ಚಾಗಿದೆ. ಇದೇ ಕಾರಣಕ್ಕೆ ದುಬಾರಿ ಸೆಲೂನ್‌ಗಳು ತಲೆಎತ್ತುತ್ತಿವೆ. ಆದರೆ ಇಲ್ಲೊಬ್ಬ ಬಾಲಕ ಹೇರ್‌ಸ್ಟೈಲ್‌ ಹುಚ್ಚಿನಿಂದ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ!

ಸಲೂನ್‌ಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ ಎನ್ನುವ ಕಾರಣಕ್ಕೆ ಈ ಯುವಕ ತನ್ನ ತಲೆಗೂದಲನ್ನು ನೇರ ಮಾಡಿಕೊಳ್ಳಲು ಯೂಟ್ಯೂಬ್‌ ಮೊರೆ ಹೋಗಿದ್ದಾನೆ. ಅದರಲ್ಲಿ ಕೂದಲಿಗೆ ಸೀಮೆ ಎಣ್ಣೆ ಹಾಕಿ ಬೆಂಕಿಕಡ್ಡಿ ಬಳಸಿ ನೇರ ಮಾಡಿಕೊಳ್ಳುವ ವಿಧಾನವನ್ನು ನೋಡಿದ್ದಾನೆ. ಅದನ್ನೇ ತಾನೂ ಮಾಡಲು ಮುಂದಾಗಿದ್ದಾನೆ. ನಂತರ ಬೆಂಕಿ ತಲೆಗೆ ಹೊತ್ತಿಕೊಂಡ ಪರಿಣಾಮ ಸಜೀವ ದಹನವಾಗಿದ್ದಾನೆ!

ಮೃತ ಬಾಲಕನನ್ನು ಶಿವನಾರಾಯಣನ್ ಎಂದು ಗುರುತಿಸಲಾಗಿದ್ದು, 7ನೇ ತರಗತಿ ಓದುತ್ತಿದ್ದ. ಯೂಟ್ಯೂಬ್ ವಿಡಿಯೋ ನೋಡಿ ಈತ ಕೂದಲಿಗೆ ಸೀಮೆ ಎಣ್ಣೆ ಹಾಕಿ ಬೆಂಕಿಕಡ್ಡಿ ಬಳಸಿ ನೇರಗೊಳಿಸಲು ಮುಂದಾಗಿದ್ದಾನೆ. ಆಗ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಹೋಗಿದ್ದ. ಸುಟ್ಟು ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಚ್ಚಲು ಮನೆಗೆ ಹೋಗಿ ಈ ಕೃತ್ಯ ಮಾಡಿದ್ದಾನೆ ಬಾಲಕ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅಪಾಯಕಾರಿ ವಿಡಿಯೋಗಳನ್ನು ನೋಡಿ ಇಂಥ ಪ್ರಯತ್ನ ಮಾಡಿದರೆ ಜೀವಕ್ಕೆ ಕುತ್ತು ಬರಲಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net