ಉಗ್ರ ಹಫೀಜ್‌ ಸಯೀದ್‌ ಮನೆ ಮುಂದೆ ಭಾರಿ ಸ್ಫೋಟ: ಇಬ್ಬರ ಸಾವು- 16 ಮಂದಿ ಸ್ಥಿತಿ ಗಂಭೀರ

hafeez
Published on

ಲಾಹೋರ್: ಪೂರ್ವ ಪಾಕಿಸ್ತಾನದ ಲಾಹೋರ್‌ನಲ್ಲಿರುವ ಲಷ್ಕರ್-ಎ-ತಯಬಾ ಸಂಸ್ಥಾಪಕ, ಭಯೋತ್ಪಾದಕ ಹಫೀಜ್ ಸಯೀದ್ ಮನೆಯ ಸಮೀಪ ಭಾರಿ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, 16 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಹಫೀಜ್‌ ಮನೆಯಿಂದ ಸುಮಾರು 120 ಮೀಟರ್ ದೂರದಲ್ಲಿ ಈ ಸ್ಫೋಟ ಸಂಭವಿಸಿದೆ. ಅನೇಕ ಭಯೋತ್ಪಾದನಾ ಪ್ರಕರಣಗಳಲ್ಲಿ ಸಿಲುಕಿರುವ ಹಫೀಸ್‌ ಸದ್ಯ ಜೈಲಿನಲ್ಲಿ ಇದ್ದಾನೆ. ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ (ಮನಿ ಲಾಂಡರಿಂಗ್‌) ಸಂಬಂಧಿಸಿದಂತೆ ಹಫೀಜ್ ವಿರುದ್ಧ ದೆಹಲಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಈ ಸ್ಫೋಟಕ್ಕೆ ಇನ್ನಷ್ಟೇ ಕಾರಣ ತಿಳಿಯಬೇಕಿದೆ ಎಂದಿದ್ದಾರೆ ಪೊಲೀಸರು.

ಗಾಯಗೊಂಡವರಲ್ಲಿ ಮಹಿಳೆಯರು, ಮಕ್ಕಳು ಮತ್ತು ಪೊಲೀಸ್ ಅಧಿಕಾರಿಯೊಬ್ಬರು ಸೇರಿದ್ದಾರೆ ಮತ್ತು ಅವರಲ್ಲಿ ಕೆಲವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಲಾಹೋರ್‌ನ ಜಿಲ್ಲಾಧಿಕಾರಿ ಮುದಾಸೀರ್ ರಿಯಾಜ್ ಮಲಿಕ್ ಹೇಳಿದ್ದಾರೆ. ಸ್ಫೋಟದಲ್ಲಿ ಹಲವಾರು ವಾಹನಗಳು ಜಖಂ ಆಗಿದ್ದು, ಹಲವಾರು ಮನೆಗಳು ಸಹ ಹಾನಿಗೊಳಗಾಗಿವೆ. ಅಪರಿಚಿತ ವ್ಯಕ್ತಿಯೊಬ್ಬ ಮೋಟಾರ್‌ ಸೈಕಲ್‌ ಅನ್ನು ಆ ಸ್ಥಳದಲ್ಲಿ ನಿಲ್ಲಿಸಿದ್ದ, ನಂತರ ಅದು ಸ್ಫೋಟಗೊಂಡಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net