ಬಟ್ಟೆಯೊಳಗೆ ಮುಚ್ಚಾಯ್ತು.. ಖಾಸಗಿ ಅಂಗಗಳಲ್ಲೂ ಅಡಗಿಸಿಯಾಯ್ತು.. ಈಗ ಪೇಸ್ಟ್​ ರೂಪದಲ್ಲಿ ತಂದಳೀಕೆ!

gold
Published on

ಹೈದರಾಬಾದ್: ನಾಚಿಕೆ ಮಾನ ಮಾರ್ಯಾದೆ ಎಲ್ಲವನ್ನೂ ಬಿಟ್ಟು ಮಹಿಳೆಯರು ಕೂಡ ತಮ್ಮ ಖಾಸಗಿ ಅಂಗಾಂಗಗಳಲ್ಲಿ ಚಿನ್ನದ ಅಕ್ರಮ ಸಾಗಾಟ ಮಾಡಿ ಸಿಕ್ಕಿಬಿದ್ದಿರುವ ಘಟನೆಗಳು ಅನೇಕ ನಡೆದಿವೆ.

ದುಬೈ ಸೇರಿದಂತೆ ಕೆಲವು ದೇಶಗಳಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಭಾರತಕ್ಕೆ ಬರುವಂಥ ಸಮಯದಲ್ಲಿ ಎಲ್ಲೆಲ್ಲಿಯೋ ಚಿನ್ನವನ್ನು ಅಡಗಿಸಿಟ್ಟುಕೊಂಡು ಕಸ್ಟಮ್ಸ್​ ಅಧಿಕಾರಿಗಳ ಕೈಗೆ ಸಿಕ್ಕಿಬೀಳುತ್ತಿರುವ ಉದಾಹರಣೆಗಳಿಗೆ ಲೆಕ್ಕವೇ ಇಲ್ಲ.

ಹೀಗೆಲ್ಲಾ ಎಲ್ಲೆಲ್ಲೋ ಹುದುಗಿಸಿಟ್ಟುಕೊಂಡರೆ ಸಿಕ್ಕಿಬೀಳಬಹುದು ಎನ್ನುವುದನ್ನು ತಿಳಿದ ಮಹಿಳೆಯೊಬ್ಬಳು ಪೇಸ್ಟ್​ ರೂಪದಲ್ಲಿ ಚಿನ್ನವನ್ನು ಹುದುಗಿಸಿಟ್ಟುಕೊಂಡಿರುವ ಬಂದಿರುವ ವಿಚಿತ್ರ ಘಟನೆ ಹೈದರಾಬಾದ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸದ್ಯ ಈ ಮಹಿಳೆ ಪೊಲೀಸ್​ ಅತಿಥಿ.

ಸುಮಾರು 74.87 ಲಕ್ಷ ಮೌಲ್ಯದ 1.5 ಕೆಜಿಗೂ ಅಧಿಕ ತೂಕದ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಈ ಮಹಿಳೆಯನ್ನು ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 1,593 ಗ್ರಾಂ (ಅಂದರೆ ಒಂದೂವರೆ ಕೆ.ಜಿಯಷ್ಟು) ತೂಕದ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಬಚ್ಚಿಟ್ಟುಕೊಂಡಿದ್ದಳು ಈಕೆ.

ದುಬೈನಿಂದ ಬಂದಿದ್ದ ವಿಮಾನವನ್ನು ಇಳಿದು ಹೊರಬರುತ್ತಿದ್ದ ಈಕೆಯ ನಡವಳಿಕೆ ಕಂಡು ಪೊಲೀಸರಿಗೆ ಸಂಶಯ ಬಂದಿದೆ. ಆಕೆಯನ್ನು ತಪಾಸಣೆಗೊಳಪಡಿಸಲಾಗಿದೆ. ಆಗ ಅನುಮಾನಾಸ್ಪದ ವಸ್ತು ಕಂಡುಬಂದಿದೆ. ತಕ್ಷಣ ಪರೀಕ್ಷಿಸಿದ ಕಸ್ಟಮ್ಸ್ ಮಹಿಳಾ ಅಧಿಕಾರಿಗಳಿಗೆ ಪೇಸ್ಟ್​ ರೂಪದ ಚಿನ್ನವಿರುವುದು ಪತ್ತೆಯಾಗಿದೆ. ಸದ್ಯ ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net