ಬೆಳ್ಳಂಬೆಳಗ್ಗೆ ಹೋಟೆಲ್​ನಲ್ಲಿ ಅಗ್ನಿ ಅನಾಹುತ: ಹೊರಕ್ಕೆ ಬರಲಾಗದೇ ಗೋಳಾಟ- ಇಬ್ಬರ ಸಾವು

fire
Published on

ಲಖನೌ: ಉತ್ತರ ಪ್ರದೇಶದ ರಾಜಧಾನಿ ಲಖನೌನ ಹೋಟೆಲ್ ಒಂದರಲ್ಲಿ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. ಏಕಾಏಕಿಯಾಗಿ ಕಟ್ಟಡ ಬೆಂಕಿಗಾಹುತಿಯಾಗುತ್ತಿದ್ದಂತೆಯೇ ಹೊರಗಡೆ ಬರಲಾಗದೇ ಜನರು ಪರದಾಡಿದ ಘಟನೆ ನಡೆದಿದೆ.

ಹಜರತ್‌ಗಂಜ್ ನಗರದ ವಿಐಪಿ ಪ್ರದೇಶದಲ್ಲಿ ಇರುವ ಈ ಹೋಟೆಲ್​ನಲ್ಲಿ 40ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಓರ್ವ ಮಹಿಳೆ ಹಾಗೂ ಓರ್ವ ಪುರುಷ ಮೃತಪಟ್ಟಿದ್ದಾರೆ. 10ಕ್ಕೂ ಅಧಿಕ ಮಂದಿಗೆ ಗಾಯಾಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಳಗಿನ 6 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಇದು ಇತರ ಕೊಠಡಿಗಳನ್ನು ಆವರಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಪ್ರಾಥಮಿಕವಾಗಿ ಹೇಳಲಾಗುತ್ತಿದ್ದರೂ ತನಿಖೆಯಿಂದ ಸತ್ಯ ಹೊರಬರಬೇಕಿದೆ. ಹೋಟೆಲ್ ಒಳಗೆ ದಟ್ಟ ಹೊಗೆ ಆವರಿಸಿದ್ದು, ಕೊಠಡಿಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಅಗ್ನಿಶಾಮಕ ದಳದ ತಂಡ ಹರಸಾಹಸ ಪಡುತ್ತಿದೆ. ಇದಾಗಲೇ ಅಗ್ನಿಶಾಮಕ ದಳದ 15-20 ವಾಹನಗಳು ಘಟನಾ ಸ್ಥಳಕ್ಕೆ ಆಗಮಿಸಿವೆ.

ಅನೇಕ ಜನರು ಕಿಟಕಿಯ ಮೂಲಕ ಹೊರಕ್ಕೆ ಹಾರಿದ್ದಾರೆ. ಹೋಟೆಲ್ ಪ್ರವೇಶಿಸಲು ಹಿಂಬದಿಯ ಗೋಡೆಯನ್ನು ಬುಲ್ಡೋಜರ್ ಮೂಲಕ ತೆರೆಯಲಾಗುತ್ತಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಕ್ಷಣದ ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿ ಯೋಗಿ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್​)

ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net