ಅತ್ತ ಪಂಚರಾಜ್ಯ, ಇತ್ತ ಕರ್ನಾಟಕ... ಮತ ಎಣಿಕೆಗೆ ಕೆಲವೇ ಗಂಟೆ... ಏನಾಗಲಿದೆ ಸಮೀಕ್ಷೆ? ಎದೆಯಲ್ಲಿ ಢವಢವ...

election
Published on

ನವದೆಹಲಿ: ನಾಳೆ ಮೇ 2 ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದೆ. ಒಂದೆಡೆ ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬೀಳಲಿದ್ದರೆ, ಇತ್ತ ಕರ್ನಾಟಕ ಮೂರು ಕ್ಷೇತ್ರಗಳ ಚುನಾವಣೆಯ ಫಲಿತಾಂಶವೂ ಬರಲಿದೆ. ಇದರಿಂದ ರಾಜಕೀಯ ಧುರೀಣರ ಎದೆಯಲ್ಲಿ ಢವಢವ ಶುರುವಾಗಿದೆ.

ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಪುದುಚೆರಿ, ಕೇರಳದ ಚುನಾವಣಾ ಫಲಿತಾಂಶ ಬರಲಿದ್ದು, ಈ ಪೈಕಿ ಬಹು ಕುತೂಹಲ ಕೆರಳಿಸಿರುವ ಕ್ಷೇತ್ರ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಆಗಿದೆ. ಅದೇ ಬೆನ್ನಲ್ಲೇ ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವ ಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಗೆ ಕೂಡ ರಾಜ್ಯದ ಜನತೆಯಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಕರೊನಾ ನಿಯಮ ಪಾಲನೆ ಜತೆಗೆ ಮತ ಎಣಿಕೆ ಕಾರ್ಯ ನಡೆಸಲು ಎಲ್ಲಾ ಕ್ಷೇತ್ರಗಳೂ ಸನ್ನದ್ಧವಾಗಿವೆ.

ಇದಾಗಲೇ ಚುನಾವಣಾ ಪೂರ್ವ ಸಮೀಕ್ಷೆ (ಎಕ್ಸಿಟ್‌ ಪೋಲ್‌) ಬಂದಿದ್ದು, ಅದರ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಹಿಂದಕ್ಕೆ ಸರಿಸಿ ಮಮತಾ ಬ್ಯಾನರ್ಜಿ ತಮ್ಮ ಖುರ್ಚಿಯನ್ನು ಭದ್ರವಾಗಿರಿಸಿಕೊಳ್ಳಲಿದ್ದಾರೆ. ಆದರೆ ಬಿಜೆಪಿ ಸೋತರೂ ಹಿಂದಿಗಿಂತಲೂ ಹೆಚ್ಚು ಸ್ಥಾನ ಪಡೆಯಲಿದೆ. ಅದೇ ರೀತಿ ತಮಿಳುನಾಡಿನಲ್ಲಿ ಡಿಎಂಕೆಯ ಎದುರು ಆಡಳಿತಾರೂಢ ಎಐಎಡಿಎಂಕೆ ಪರಾಭವಗೊಳ್ಳಲಿದೆ.

ಕೇರಳದಲ್ಲಿ ಅಧಿಕಾರದಲ್ಲಿರುವ ಎಡಪಕ್ಷ ನೇತೃತ್ವದ ಎಲ್‌ಡಿಎಫ್, ಅಸ್ಸಾಂನಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಲಿದ್ದು, ಪುದುಚೆರಿಯಲ್ಲಿ ಎಐಎಡಿಎಂಕೆ, ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ಪಶ್ಚಿಮ ಬಂಗಾಳದ ವಿಧಾನಸಭೆಗೆ ಎಂಟು ಹಂತಗಳಲ್ಲಿ ಮತದಾನ ನಡೆದಿದ್ದರೆ, ಅಸ್ಸಾಂ, ತಮಿಳುನಾಡು, ಪುದುಚೆರಿ ಮತ್ತು ಕೇರಳ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ಆಗಿದೆ.

ಇತ್ತ ಕರ್ನಾಟಕದಲ್ಲಿ ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರ, ಶಾಸಕ ನಾರಾಯಣರಾವ್ ಅವರ ನಿಧನದಿಂದ ಬಸವಕಲ್ಯಾನ ವಿಧಾನಸಭಾ ಕ್ಷೇತ್ರಕ್ಕೆ ಹಾಗೂ ಮಸ್ಕಿ ಶಾಸಕರಾಗಿದ್ದ ಪ್ರತಾಪ್‌ಗೌಡ ಪಾಟೀಲ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆದಿದೆ. ಎಕ್ಸಿಟ್‌ ಪೋಲ್‌ ಪ್ರಕಾರ ಎಲ್ಲೆಡೆವೂ ಬಿಜೆಪಿ ಗೆಲುವು ಸಾಧಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net