ಮಾಜಿ ಶಾಸಕ ಫುಲ್​ಟೈಟ್​? ಎರ್ರಾಬಿರ್ರಿ ಕಾರು ಓಡಿಸಿ ಕಂಡಕಂಡಲ್ಲಿ ಗುದ್ದಿಸಿ ಭಾರಿ ಹಾನಿ.. ಸಂತ್ರಸ್ತರು ಗಪ್​ಚುಪ್​!

accident
Published on

ನವದೆಹಲಿ: ಮಧ್ಯಪ್ರದೇಶದ ಸಾಗರ್‌ನ ಪಕ್ಷೇತರ ಶಾಸಕರಾಗಿದ್ದ ಸುನಿಲ್ ಜೈನ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ನಿನ್ನೆ ಮಧ್ಯರಾತ್ರಿ ಇವರು ಚಲಾಯಿಸುತ್ತಿದ್ದ ಕಾರು ಸಿಕ್ಕಸಿಕ್ಕಲ್ಲಿ ಗುದ್ದಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ.

ಉತ್ತರ ದೆಹಲಿಯ ಗೀತಾ ಕಾಲೋನಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೊದಲಿಗೆ ಈ ಕಾರಿನ ರಭಸಕ್ಕೆ ಹಲವು ವಾಹನಗಳು ಹಾನಿಗೊಳಗಾಗಿವೆ. ವೇಗವಾಗಿ ಬಂದ ಕಾರು ಮೊದಲು ವ್ಯಾಗನ್ಆರ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದು ಒಂದು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ವ್ಯಾಗನ್ಆರ್ ಚಾಲಕ ಮತ್ತು ಸ್ಕೂಟಿ ಸವಾರರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಜೈನ್​ ಕಾರು ಓಡುತ್ತಿದ್ದರು. ಅವರ ಪಕ್ಕದಲ್ಲಿ ಮಗಳು ಇದ್ದರೆ, ಹಿಂದಿನ ಸೀಟ್​ನಲ್ಲಿ ಡ್ರೈವರ್​ ಇರುವುದು ತಿಳಿದುಬಂದಿದೆ. ಕಾರು ಅಪಘಾತದಲ್ಲಿ ನಜ್ಜುಗುಜ್ಜಾಗಿದೆ. ಅದರ ಎಲ್ಲಾ ಏರ್‌ಬ್ಯಾಗ್‌ಗಳು ತೆರೆದುಕೊಂಡಿರುವುದು ನೋಡಿದರೆ ಅಪಘಾತದ ಗಂಭೀರತೆ ಅರ್ಥವಾಗುತ್ತದೆ ಎಂದು ಡಿಸಿಪಿ ಹೇಳಿದ್ದಾರೆ.

ಪ್ರತ್ಯಕ್ಷದರ್ಶಿಯಾಗಿರುವ ಗೌರವ್ ಕುಮಾರ್ ಎನ್ನುವವರು ಹೇಳಿದ್ದೇನೆಂದರೆ, ನನ್ನ ಹೆಂಡತಿ ಮತ್ತು ಆರು ತಿಂಗಳ ಮಗು ಜತೆ ನಾನು ಸ್ಕೂಟಿಯಲ್ಲಿ ಹೋಗುತ್ತಿದ್ದೆ. ಈ ಭೀಕರ ಅಪಘಾತ ನೋಡಿ ಶಾಕ್​ ಆಗಿದ್ದೇವೆ. ಚಾಲಕ ಮದ್ಯದ ನಶೆಯಲ್ಲಿ ಇರುವಂತೆ ಕಾಣಿಸಿತ್ತು. ಏಕೆಂದರೆ ಅಪಘಾತ ಸಂಭವಿಸಿದ ಬಳಿಕ ಆತ ಬಿಯರ್ ಬಾಟಲಿಗಳನ್ನು ಎಸೆಯುವುದನ್ನು ನಾವು ನೋಡಿದ್ದೇವೆ ಎಂದಿದ್ದಾರೆ.

ಆದರೆ ವಿಚಿತ್ರ ಎಂದರೆ ಗಾಯಗೊಂಡವರು ಯಾರೂ ಇನ್ನೂ ದೂರು ದಾಖಲಿಸಿಲ್ಲ. ಆದ್ದರಿಂದ ಗಾಯಾಳುಗಳು ಹಾಗೂ ಹಾನಿಗೊಳದಾಗ ವಾಹನಗಳ ಮಾಲೀಕರ ಜತೆ ಮಾಜಿ ಶಾಸಕ ಮಧ್ಯರಾತ್ರಿಯೇ ಡೀಲ್​ ಮಾಡಿಕೊಂಡಿರುವ ಸಂದೇಹ ಪೊಲೀಸರಿಗೆ ಬಂದಿದೆ.

ಯಾರೂ ದೂರು ದಾಖಲು ಮಾಡಲಿಲ್ಲ. ಆದರೂ ನಾವು ಸುಮ್ಮನೆ ಬಿಟ್ಟಿಲ್ಲ. ಆದಾಗ್ಯೂ ಐಪಿಸಿಯ ಸೆಕ್ಷನ್ 279 (ಸಾರ್ವಜನಿಕ ದಾರಿಯಲ್ಲಿ ದುಡುಕಿನ ಚಾಲನೆ ಅಥವಾ ಸವಾರಿ) ಮತ್ತು 337 (ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ಕೃತ್ಯದಿಂದ ನೋವುಂಟುಮಾಡುವುದು) ಅಡಿಯಲ್ಲಿ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ, ತನಿಖೆ ನಡೆಯುತ್ತಿದೆ ಎಂದಿದ್ದಾರೆ ಪೊಲೀಸರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net