

ಗುರುಗ್ರಾಮ: ತಿಜೋರಿಯ ಮೇಲೆ ಐ ಲವ್ ಯು, ಗುಡ್ ಬೈ ಎಂದು ಬರೆದಿರುವ ವೈದ್ಯನೊಬ್ಬ ವಿಷದ ಇಂಜೆಕ್ಷನ್ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಪತ್ನಿಗೆ ಅಕ್ರಮ ಸಂಬಂಧ ಇದ್ದ ಹಿನ್ನೆಲೆಯಲ್ಲಿ ಮನನೊಂದು ಈ ರೀತಿ ಮಾಡಿಕೊಂಡಿರುವುದಾಗಿ ವೈದ್ಯನ ಪಾಲಕರು ಸೊಸೆಯನ್ನು ದೂರಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿಯ ಐಸಿಯು ಎಕ್ಸಪರ್ಟ್ ಆಗಿರುವ ಮನುಜ್ ಸೋಡಿ ಆತ್ಮಹತ್ಯೆಯ ಹಾದಿ ತುಳಿದಿದ್ದಾರೆ. ಆತ್ಮಹತ್ಯೆಗೂ ಮುನ್ನ ಮಗಳ ಬಳಿ ಮಾತನಾಡಿದ್ದ ಮನೋಜ್, ಆಕೆಯ ಜತೆ ಸಮಯ ಕಳೆದಿದ್ದರು. ಆದರೆ ಮಗಳಿಗೆ ಕೂಡ ತಮ್ಮ ಇಂಥದ್ದೊಂದು ಘನಘೋರ ಕೃತ್ಯದ ಬಗ್ಗೆ ಎಳ್ಳಷ್ಟೂ ಸಂಶಯ ಬರದಂತೆ ನಡೆದುಕೊಂಡಿದ್ದರು.
ಕೆಲ ಸಮಯ ಮಗಳ ಜತೆ ಕಳೆದಿದ್ದ ಅವರು ನಂತರ ಕೋಣೆಗೆ ತೆರಳಿ ವಿಷದ ಇಂಜೆಕ್ಷನ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟೈಂ ಆದರೂ ಅಪ್ಪ ಹೊರಗೆ ಬರದದ್ದನ್ನು ಕಂಡ ಮಗಳು ಕೋಣೆಗೆ ಹೋದಾಗಲೇ ವಿಷಯ ತಿಳಿದಿದೆ.
ಇದನ್ನೂ ಓದಿ: ಡ್ರಗ್ಸ್ ಕೇಸ್: ತಾರಾ ದಂಪತಿಗೆ ಅಂತೂ ಸಿಕ್ತು ಬೇಲ್
ಇಂಜೆಕ್ಷನ್ ಚುಚ್ಚಿಕೊಂಡು ಬಿದ್ದ ಅಪ್ಪ ಹಾಗೂ ತಿಜೋರಿ ಮೇಲೆ ಇದ್ದ ಬರಹಗಳನ್ನು ನೋಡಿ ಚೀರಿಕೊಂಡ ಮಗಳು ಎಲ್ಲರನ್ನೂ ಕರೆದಿದ್ದಾಳೆ. ಆದರೆ ಆ ವೇಳೆಗಾಗಲೇ ಮನೋಜ್ ಮೃತಪಟ್ಟಿದ್ದರು. ಸ್ವಲ್ಪ ಗಂಟೆ ಮೊದಲು ತನ್ನ ಬಳಿ ತಂದೆ ಚೆನ್ನಾಗಿಯೇ ಮಾತನಾಡಿದ್ದರು, ಆದರೆ ಏನೊಂದು ವಿಷಯವನ್ನೂ ಹಂಚಿಕೊಂಡಿರಲಿಲ್ಲ ಎಂದು ಮಗಳು ಕಣ್ಣೀರು ಹಾಕಿದ್ದಾಳೆ.
ಮನೋಜ್ ಅವರ ಪಾಲಕರಿಗೆ ಏಕೈಕ ಪುತ್ರ. ಅವರ ಗೋಳು ಹೇಳತೀರದಾಗಿದೆ. ಮಗ ಮತ್ತು ಸೊಸೆ ನಡುವೆ ಜಗಳ ಆಗುತ್ತಿತ್ತು. ಇಬ್ಬರ ವೈವಾಹಿಕ ಜೀವನ ಸುಖಮಯವಾಗಿರಲಿಲ್ಲ. ಸಾಂಸರಿಕ ಕಲಹ ಹಿನ್ನೆಲೆ ಮಗ ಮಾನಸಿಕವಾಗಿ ಕುಗ್ಗಿದ್ದನು. ಸೊಸೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆಯೂ ಆತನಿಗೆ ಅನುಮಾನವಿತ್ತು, ಇದರಿಂದ ಆತ ತುಂಬಾ ನೊಂದುಕೊಂಡಿದ್ದ. ಆದ್ದರಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.