ವಿಚ್ಛೇದನಕ್ಕೆ ಅರ್ಜಿ ಹಾಕಿದ್ರೆ ಅವಳೇ ಪರಿಹಾರ ಕೊಡಬೇಕಾಗತ್ತೆ ಎಂದು ಸುಮ್ಮನಿದ್ದಾಳೆ ಪತ್ನಿ- ಹೀಗೂ ಕಾನೂನು ಇದ್ಯಾ?

nyayadevate1
Published on
ಪ್ರಶ್ನೆ: ನನಗೂ ಪತ್ನಿಗೂ ಆಗಿಬರುತ್ತಿಲ್ಲ. ಅವಳು ಅಪ್ಪನ ಮನೆಗೆ ಹೋದವಳು ವಾಪಸಾಗಲಿಲ್ಲ. ಗಂಡನ ಮನೆಯವರೇ ವಿಚ್ಛೇದನ ಕೇಳಲಿ ಎಂದು ಇವರು ಸುಮ್ಮನಿದ್ದಾರೆ. ಈಗ ಪ್ರಶ್ನೆ ಏನೆಂದರೆ ಹುಡುಗಿಯೇ ಮೊದಲು ವಿಚ್ಛೇದನ ಕೇಳಿದರೆ ಹುಡುಗನಿಗೆ ಪರಿಹಾರ ಕೊಡಬೇಕಾಗುತ್ತಾ? ಹುಡುಗಿಯೇ ವಿಚ್ಛೇದನ ಕೇಳಿದರೆ ಮದುವೆಯ ಸಮಯದಲ್ಲಿ ಹಾಕಿದ್ದ ಒಡವೆಯನ್ನು ಹುಡುಗನ ಮನೆಯವರು ವಾಪಸ್ ಕೊಡದೇ ಉಳಿಸಿಕೊಳ್ಳಬಹುದಾ?

ಉತ್ತರ: ವಿಚ್ಛೇದನ ಯಾರು ಕೇಳಿದರು ಎನ್ನುವುದರ ಮೇಲೆ ಯಾವಾಗಲೂ ನ್ಯಾಯಾಲಯ ಪರಿಹಾರ ಕೊಡುವುದಿಲ್ಲ. ವಿಚ್ಛೇದನ ಕೊಡಲು ಕ್ರೂರತೆಯ ಅಂಶಗಳನ್ನು ನಿಮ್ಮ ಅಕ್ಕನ ಮಗಳು ನ್ಯಾಯಾಲಯದಲ್ಲಿ ಸಾಬೀತು ಪಡಿಸಿದರೆ ಆಗ ಆಕೆಗೆ ವಿಚ್ಛೇದನ ಸಿಗುತ್ತದೆ. ವಿಚ್ಛೇದನದ ಪ್ರಕರಣದಲ್ಲಿ ಕೆಲವೊಮ್ಮೆ ನ್ಯಾಯಾಲಯ ಆಲಿಮೊನಿ ಕೊಡುವ ಆದೇಶ ಮಾಡುತ್ತದೆ. ನಿಮ್ಮ ಅಕ್ಕನ ಮಗಳ ಗಂಡನಿಗೆ ಅವನದೆ ಆದ ಸಂಪಾದನೆ ಇದ್ದು, ಆತ ದೈಹಿಕವಾಗಿ ಮಾನಸಿಕವಾಗಿ ಸದೃಢನಾಗಿದ್ದರೆ ನಿಮ್ಮ ಅಕ್ಕನ ಮಗಳು ಆತನಿಗೆ ಏನೂ ಕೊಡುವ ಪ್ರಶ್ನೆ ಬರುವುದಿಲ್ಲ. ಆಕೆಗೆ ಸಂಪಾದನೆಯೇ ಇಲ್ಲದಿದ್ದರೂ ಕೊಡಬೇಕಾಗಿರುವುದಿಲ್ಲ. ಮದುವೆಯ ಸಮಯದಲ್ಲಿ ಕೊಟ್ಟಿದ್ದ ಒಡವೆಗಳನ್ನು ವಾಪಸ್ ಮಾಬೇಕು ಎನ್ನುವ ಅರ್ಜಿಯನ್ನೂ ಆಕೆ ನ್ಯಾಯಾಲಯದಲ್ಲಿ ಹಾಕಿದರೆ, ಸಾಕ್ಷಿ ಆಧಾರ ಪರಿಶೀಲಿಸಿ ಆದೇಶ ಮಾಡುತ್ತಾರೆ. ಆಕೆ ಹೆದರಬೇಕಾಗಿಲ್ಲ.

ನಿಮ್ಮ ಅಕ್ಕನ ಮಗಳು ಮೊದಲಿಗೆ ತಮ್ಮ ತಾಲ್ಲೂಕಿನ ಮಧ್ಯಸ್ಥಿಕಾ ಕೇಂದ್ರಕ್ಕೆ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಗೆ ಅರ್ಜಿ ಕೊಡಲಿ. ಅಲ್ಲಿ ಕೇಂದ್ರದವರು ನಿಮ್ಮ ಅಕ್ಕನ ಮಗಳ ಗಂಡನಿಗೆ ನೋಟಿಸು ಕೊಟ್ಟು ಅವರನ್ನು ಕರೆಸುತ್ತಾರೆ. ಮಧ್ಯಸ್ಥಿಕೆಗಾರರ ಮುಂದೆ ಕೂತು ಮಾತಾಡಿದಾಗ ಒಡವೆಯ ಬಗ್ಗೆ, ವಿಚ್ಛೇದನದ ಬಗ್ಗೆ ಒಂದು ಒಪ್ಪಂದಕ್ಕೆ ಬಂದರೆ ಇಬ್ಬರೂ ಪರಸ್ಪರ ಒಪ್ಪಿಗೆಯ ವಿಚ್ಛೇದನದ ಪ್ರಕರಣ ದಾಖಲಿಸಬಹುದು.

ಹಾಗೆ ಮಾಡಿದರೆ 7-8 ತಿಂಗಳ ಒಳಗೆ ವಿಚ್ಛೇದನದ ಆದೇಶ ಸಿಗುತ್ತದೆ. ಒಬ್ಬರ ಮೇಲೆ ಒಬ್ಬರು ಯಾವ ಆರೋಪವನ್ನೂ ಹಾಕಬೇಕಿರುವುದಿಲ್ಲ. ಒಂದು ವೇಳೆ ರಾಜಿ ಸೂತ್ರಕ್ಕೆ ಅವರು ಒಪ್ಪದಿದ್ದರೆ ಅಗ ನಿಮ್ಮ ಅಕ್ಕನ ಮಗಳು ಧೈರ್ಯವಾಗಿ ಕ್ರೂರತೆಯ ಅಂಶಗಳ ಆಧಾರದ ಮೇಲೆ ಪ್ರಕರಣ ದಾಖಲಿಸಬಹುದು. ವಿಚ್ಛೇದನ ಕೇಳಿದರು ಎನ್ನುವ ಕಾರಣಕ್ಕೆ ಮಾತ್ರ ನ್ಯಾಯಾಲಯ , ಕೇಳಿದವರ ವಿರುದ್ಧ ಪರಿಹಾರ ಕೊಡಿ ಎನ್ನುವ ಆದೇಶ ಮಾಡುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net