ದೇವೇಗೌಡರ ಕೈಹಿಡಿದು ಸ್ವಾಗತಿಸಿ ಕುಳ್ಳರಿಸಿದ ಪ್ರಧಾನಿ ಮೋದಿ: ಶುರುವಾಯ್ತು ಬಿಸಿಬಿಸಿ ಚರ್ಚೆ

modi
Published on

ನವದೆಹಲಿ: ಒಂದೆಡೆ ಬಿಜೆಪಿ ಮುಖಂಡ, ಸಂಸದ ಸುಬ್ರಮಣಿಯನ್‌ ಸ್ವಾಮಿ ಮಾಜಿ ಪ್ರಧಾನಿ ದೇವೇಗೌಡರ ಜತೆ ದೋಸೆ, ಇಡ್ಲಿ, ವಡೆ ತಿಂದಿರುವುದಾಗಿ ಟ್ವೀಟ್‌ ಮಾಡಿ ಕೋಲಾಹಲ ಸೃಷ್ಟಿಸಿದ್ದ ಬೆನ್ನಲ್ಲೇ ಇನ್ನೊಂದು ಕುತೂಹಲಕರ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇವೇಗೌಡ ಅವರನ್ನು ಆತ್ಮೀಯವಾಗಿ ಕೈಹಿಡಿದುಕೊಂಡು ಹೋಗಿ ಸೀಟಿನಲ್ಲಿ ಕುಳ್ಳರಿಸಿದ ಘಟನೆ ನಡೆದಿದೆ.

ಸಂಸತ್ತಿನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ದೆಹಲಿಗೆ ತೆರಳಿರುವ ದೇವೇಗೌಡ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅನೌಪಚಾರಿಕವಾಗಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. ಸಂಸತ್​ನಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಇಂದು ಭೇಟಿಯಾಗಿ ಬಹಳ ಸಂತೋಷವಾಯಿತು ಎಂದು ಪ್ರಧಾನಿಯವರು ಟ್ವೀಟ್ ಮಾಡಿದ್ದಾರೆ.

ಮೋದಿಯವರು ದೇವೇಗೌಡರ ಕೈ ಹಿಡಿದು, ಕುರ್ಚಿಯಲ್ಲಿ ಕೂರಿಸಿ, ನಗುತ್ತಾ ಮಾತನಾಡುತ್ತಿರುವ ಫೋಟೋಗಳು ಇದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ಭಾರಿ ವೈರಲ್‌ ಆಗಿದ್ದು, ಬಿಸಿಬಿಸಿ ಚರ್ಚೆ ಶುರುವಾಗಿದೆ. ಜತೆಗೆ ಇಂಥದ್ದೊಂದು ಆತ್ಮೀಯ ಸ್ವಾಗತಕ್ಕೆ ಅಪಾರ ಮೆಚ್ಚುಗೆಯೂ ವ್ಯಕ್ತವಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ದೇವೇಗೌಡರು,ಈ ಹಿಂದೆ ಅನೇಕ ಬಾರಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದೇನೆ. ಪ್ರತಿಬಾರಿಯೂ ತುಂಬಾ ಚೆನ್ನಾಗಿ, ಗೌರವದಿಂದ ಮಾತನಾಡಿದ್ದಾರೆ. ಇದುವರೆಗೂ ಸಿಟ್ಟು, ರೋಷವನ್ನೂ ನನ್ನೆದುರು ತೋರಲಿಲ್ಲ. ನನಗೆ ಮಂಡಿನೋವು ಇರುವುದರಿಂದ ಅವರೇ ಬಾಗಿಲವರೆಗೂ ಬಿಟ್ಟರು ಎಂದು ತಿಳಿಸಿದ್ದಾರೆ.

ಈ ಹಿಂದೆ ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಕ್ಕೆ ದೇವೇಗೌಡರ ಪ್ರಧಾನಿಗೆ ಅಭಿನಂದನೆ ಸಲ್ಲಿಸಿದ್ದರು. ಕೇದಾರನಾಥ ಕ್ಷೇತ್ರದಲ್ಲಿ ಆದಿ ಶಂಕರಾಚಾರ್ಯರ ಪುತ್ಥಳಿ ನಿರ್ಮಾಣ ಮಾಡುವ ಮೂಲಕ ಪ್ರಧಾನಿ ಮೋದಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ನಾನು ಕೂಡ ಕೇದಾರನಾಥಕ್ಕೆ ತೆರಳಿ ಶಂಕರಾಚಾರ್ಯರ ದರ್ಶನ ಪಡೆಯಬೇಕೆಂದು ಹೇಳಿದ್ದರು. ನಂತರ ರೈತರ ಸಮಸ್ಯೆಗಳನ್ನು ಬಿಚ್ಚಿಟ್ಟು ದೇವೇಗೌಡರು ಪತ್ರ ಬರೆದಿದ್ದಾಗ ಪ್ರಧಾನಿ ಮೋದಿ ಸ್ಪಂದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net