ಟೂಲ್​ಕಿಟ್​ ಹಗರಣ ಬಯಲಾಗ್ತಿದ್ದಂತೆ ಕೋರ್ಟ್​ಗೆ ಧಾವಿಸಿದ್ದ ದಿಶಾ- ನ್ಯಾಯಾಲಯ ಹೇಳಿದ್ದೇನು?

disha
Published on

ನವದೆಹಲಿ: ಭಾರತದ ವಿರುದ್ಧ ಷಡ್ಯಂತ್ರ ರಚಿಸಿರುವ ಟೂಲ್​ಕಿಟ್​ ಹಗರಣ ಬಯಲಾಗುತ್ತಿದ್ದಂತೆಯೇ, ಮಾಧ್ಯಮಗಳಲ್ಲಿ ಅವರ ವರದಿ ಯಾವಾಗ ಬಿತ್ತರಗೊಳ್ಳಲು ಶುರುವಾಯ್ತೋ, ಈ ಆರೋಪದಲ್ಲಿ ಬಂಧಿಯಾಗಿರುವ ಸಾಮಾಜಿಕ ಕಾರ್ಯಕರ್ತೆ ದಿಶಾ ರವಿ ದೆಹಲಿ ಹೈಕೋರ್ಟ್​ ಮೊರೆ ಹೋಗಿದ್ದಳು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಮಾಧ್ಯಮಗಳಿಗೆ ನೀಡದಂತೆ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಈಕೆ ಕೋರಿದ್ದಳು.

ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಯಾವುದೇ ತನಿಖಾ ದಾಖಲೆಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ಪೊಲೀಸರಿಗೆ ಆದೇಶ ನೀಡಬೇಕು ಹಾಗೂ ಟೂಲ್‌ಕಿಟ್‌ಗೆ ಸಂಬಂಧಿಸಿದಂತೆ ಮೂರನೆಯ ವ್ಯಕ್ತಿಯ ಜತೆ ತಾನು ನಡೆಸಿರುವ ವಾಟ್ಸ್‌ಆ್ಯಪ್‌ ಸಂದೇಶಗಳನ್ನು ಮಾಧ್ಯಮಗಳಿಗೆ ನೀಡದಂತೆ ಅವರಿಗೆ ನಿರ್ದೇಶಿಸಬೇಕು ಎಂದು ಆಕೆ ಕೋರಿಕೊಂಡಿದ್ದಳು.

ದಿಶಾ ರವಿಯ ಮನವಿಯನ್ನು ಕೋರ್ಟ್​ ಮಾನ್ಯ ಮಾಡಿದೆ. ಈ ಹಗರಣದ ಕುರಿತ ತನಿಖಾ ವರದಿಯನ್ನು ಮಾಧ್ಯಮಗಳಿಗೆ ನೀಡದಂತೆ ಕೋರ್ಟ್​ ಪೊಲೀಸರಿಗೆ ಆದೇಶಿಸಿದೆ. ಈ ಕುರಿತು ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆಗಳನ್ನು ನೀಡದಂತೆಯೂ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ. ಒಂದು ವೇಳೆ ಎಲ್ಲಾ ಸಾಕ್ಷ್ಯಾಧಾರಗಳು ಸಿಕ್ಕರೂ, ಸಿಕ್ಕಿರುವ ಸಾಕ್ಷ್ಯಾಧಾರಗಳು ಈ ಹಗರಣದ ಕುರಿತು ಇದ್ದರೂ ಅಂಥ ಸಂದರ್ಭದಲ್ಲಿಯೂ ಯಾವುದೇ ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡಬಾರದು ಎಂದು ಕೋರ್ಟ್​ ಹೇಳಿದೆ.

ಆರೋಪಿಯ ಹಕ್ಕನ್ನು ಕಾಪಾಡುವುದು ಮಾಧ್ಯಮಗಳ ಕರ್ತವ್ಯವಾಗಿದೆ. ಈ ಕುರಿತು ಮಾಧ್ಯಮಗಳೂ ಆಲೋಚನೆ ಮಾಡಬೇಕಿದೆ ಎಂದಿದೆ ಕೋರ್ಟ್​.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net