ಡಿ.8ಕ್ಕೆ ಮತ್ತೊಮ್ಮೆ ಕರ್ನಾಟಕವೂ ಬಂದ್​! ರೈತ ಸಂಘಟನೆಗಳಿಂದ ಕರೆ

karntaka bundh
Published on

ಬೆಂಗಳೂರು: ಕೃಷಿ ಮಸೂದೆ ವಿರೋಧಿಸಿ ವಿವಿಧ ರೈತ ಸಂಘಟನೆಗಳು ಕರೆ ನೀಡಿರುವ ಡಿಸೆಂಬರ್ 8ರ ಭಾರತ ಬಂದ್‌ ಭಾಗವಾಗಿ ಕರ್ನಾಟಕದಲ್ಲಿ ಸಂಪೂರ್ಣ ಬಂದ್ ಆಚರಿಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಬಂದ್​ ನಡೆದ ಮೂರನೇ ದಿನಕ್ಕೆ ಮತ್ತೆ ಕರ್ನಾಟಕ ಬಂದ್​ ಆಗಲಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ರೈತರ ಪ್ರತಿಭಟನೆ ಸರಿಯಾಗಿ ಮಾಡಲು ಕೊಡಲಿಲ್ಲ. ಅವರ ಚಳವಳಿಯನ್ನು ಸರ್ಕಾರ ಹತ್ತಿಕ್ಕುವ ಕೆಲಸ ಮಾಡಿದೆ. ಬೇಜವಾಬ್ದಾರಿಯಿಂದ ವರ್ತಿಸಿದೆ. ಆದ್ದರಿಂದ ಕರ್ನಾಟಕ ಬಂದ್​ ಮಾಡುವ ಮೂಲಕ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ ಎಂದು ಅವರು ತಿಳಿಸಿದರು.

ಯಡಿಯೂರಪ್ಪನವರು ನಮ್ಮ ಬಂದ್ ಹತ್ತಿಕ್ಕುವ ಕೆಲಸ ಮಾಡಬಾರದು ಎಂದರು. ಈ ಬಂದ್‌ಗೆ ಎಲ್ಲ ಸಂಘಟನೆಗಳು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡರು.

ಕೇಂದ್ರ ಸರಕಾರ ರೈತರ ಹಾಗೂ ದೇಶ ವಿರೋಧಿ ಮತ್ತು ಕಾರ್ಪೋರೇಟ್ ಕಂಪನಿ ಪರವಾದ ಕೃಷಿ ಕಾಯ್ದೆಗಳು ಮತ್ತು ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ- 2020 ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ - 2020 ಗಳನ್ನು ಬೇಷರತ್ತಾಗಿ ವಾಪಾಸು ಪಡೆಯುವಂತೆ ಒತ್ತಾಯಿಸಲಾಗುವುದು. ಅಂದು ಎಲ್ಲಾ ಹೆದ್ದಾರಿ, ರಸ್ತೆಗಳನ್ನು ಬಂದ್ ಮಾಡುತ್ತೇವೆ.

ಬಂದ್‌ಗೆ ಎಡಪಕ್ಷದವರು, ಪುಟ್ಟಣ್ಣಯ್ಯನವರ ರೈತ ಸಂಘಟನೆ, ಕುರುಬೂರು ಶಾಂತಕುಮಾರ್ ಸಂಘಟನೆಯವರು ಭಾಗವಹಿಸುತ್ತಾರೆ. ಅನೇಕ ಕನ್ನಡ ಪರ ಸಂಘಟನೆಗಳು, ಮಹಿಳಾ ಸಂಘಟನೆಗಳು ಭಾಗವಹಿಸಲಿವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net