ಪುನೀತ್‌ ಸಾವಿನಿಂದ ನೊಂದು ಅನ್ನ ನೀರು ತ್ಯಜಿಸಿದ ಮಂಡ್ಯದ ಮತ್ತೋರ್ವ ಅಭಿಮಾನಿಯ ಸಾವು

mandya
Published on

ಮಂಡ್ಯ: ನಟ ಪುನೀತ್‌ ರಾಜ್‌ಕುಮಾರ್‌ ಅವರ ಸಾವನ್ನು ಅರಗಿಸಿಕೊಳ್ಳಲಾಗದೇ ಖಿನ್ನತೆಗೆ ಜಾರಿರುವ ಅಭಿಮಾನಿಗಳು ಅದೆಷ್ಟೋ ಮಂದಿ. ಇವರ ಸಾವಿನ ನೋವನ್ನು ಜೀರ್ಣಿಸಿಕೊಳ್ಳಲಾಗದೇ ಇದಾಗಲೇ ಇಬ್ಬರು ಅಭಿಮಾನಿಗಳು ಮೃತಪಟ್ಟಿದ್ದಾರೆ.

ಇದೀಗ ಮಂಡ್ಯದಲ್ಲಿ ಇನ್ನೊಂದು ಘಟನೆ ನಡೆದಿದೆ. ನಿನ್ನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಯಲಾದಹಳ್ಳಿ ಗ್ರಾಮದ ವೈ.ಎಸ್.ಸುರೇಶ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಅದರ ಬೆನ್ನಲ್ಲೇ ಕೆ.ಎಂ.ರಾಜೇಶ್ (50) ಎಂಬುವವರು ಈಗ ಮೃತಪಟ್ಟಿದ್ದಾರೆ. ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದ ಕೆ.ಎಂ.ರಾಜೇಶ್ ಅವರು, ಪುನೀತ್ ನಿಧನದ ಬಳಿಕ ಸರಿಯಾಗಿ ಊಟ, ನೀರು ಸೇವಿಸದೇ ಅಸ್ವಸ್ಥರಾಗಿದ್ದರು.

ನಿನ್ನೆ ಅಂತಿಮ ದರ್ಶನಕ್ಕೆ ಹೋಗುವುದಾಗಿ ಮನೆ ಬಿಟ್ಟಿದ್ದ ರಾಜೇಶ್ ಅವರು, ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ಬಳಿ ಸುಸ್ತಾಗಿ ಬಿದ್ದಿದ್ದರು. ಸಂಜೆ ಪರಿಚಯಸ್ಥರು ನೋಡಿ ಮನೆಗೆ ಕರೆದುಕೊಂಡು ಹೋಗಿದ್ದರು.

ಬಳಿಕ ಕುಟುಂಬಸ್ಥರು ವೈದ್ಯರಿಂದ ಚಿಕಿತ್ಸೆಯನ್ನೂ ಕೊಡಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮಧ್ಯ ರಾತ್ರಿ 12 ಗಂಟೆ ಸುಮಾರಿನಲ್ಲಿ ರಾಜೇಶ್‌ ಮೃತಪಟ್ಟಿದ್ದಾರೆ. ಡಾ.ರಾಜ್ ಕುಟುಂಬದ ಅಪ್ಪಟ ಅಭಿಮಾನಿಯಾಗಿದ್ದ ರಾಜೇಶ್ ಅವರು, ಡಾ.ರಾಜ್ ಕುಮಾರ್ ಎಂದು ಹೆಸರಿಟ್ಟು ಹೋಟೆಲ್ ನಡೆಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net