'ನಮ್ಮ ಸಾವಿನ ರಹಸ್ಯ ಈ ಟೇಬಲ್​ ಮೇಲಿದೆ... ಡಾಕ್ಟರ್​ ಕೊಟ್ಟಿರೋ ರಿಪೋರ್ಟ್​ ಇಲ್ಲಿದೆ...'

couple
Published on

ನೋಯ್ಡಾ (ಉತ್ತರ ಪ್ರದೇಶ): ಪ್ರೀತಿಸಿ ಮದುವೆಯಾದ ಜೋಡಿಯೊಂದು ದಾರುಣವಾಗಿ ಅಂತ್ಯ ಕಂಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್​​ 22 ಪ್ರದೇಶದಲ್ಲಿ ನಡೆದಿದೆ. ಮೂರು ವರ್ಷಗಳ ಹಿಂದೆ ಮದುವೆಯಾಗಿರುವ ಶಶಿಕಲಾ ಮತ್ತು ಅರುಣ್​ ದಂಪತಿ ಡೆತ್​ನೋಟ್​ ಬರೆದಿಟ್ಟು ಸಾವಿನ ಹಾದಿ ಹಿಡಿದಿದ್ದಾರೆ.

ಖಾಸಗಿ ಕಂಪನಿವೊಂದರಲ್ಲಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ ಅರುಣ್​ ಅವರಿಗೆ ಕ್ಯಾನ್ಸರ್​ ಕಾಣಿಸಿಕೊಂಡಿದ್ದೇ ಈ ಅಂತ್ಯಕ್ಕೆ ಕಾರಣವಾಗಿದೆ. ಅರುಣ್​ ಅವರಿಗೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಡಾಕ್ಟರ್​ ಬಳಿ ತೋರಿಸಿದ್ದಾರೆ. ಅದಾಗಲೇ ಕ್ಯಾನ್ಸರ್​ ಕೊನೆಯ ಸ್ಟೇಜ್​ನಲ್ಲಿ ಇರುವುದು ತಿಳಿದಿದೆ.

ಡಾಕ್ಟರ್​ ಕೊಟ್ಟ ರಿಪೋರ್ಟ್​ ನೋಡಿ ದಂಪತಿ ಕಂಗಾಲಾಗಿ ಹೋಗಿದ್ದಾರೆ. ಇನ್ನು ಅರುಣ್​ ಬದುಕುವುದು ಕಷ್ಟ ಎಂದು ಇಬ್ಬರಿಗೂ ತಿಳಿದಿದೆ. ಪತಿ ಸತ್ತುಹೋದರೆ ತಮ್ಮ ಭವಿಷ್ಯ ಏನು ಎಂಬ ಚಿಂತೆ ಶಶಿಕಲಾ ಅವರಿಗೆ ಕಾಡಿದೆ. ಇದರಿಂದ ದಂಪತಿ ಅನೇಕ ದಿನಗಳಿಂದ ಮಾನಸಿಕವಾಗಿ ಒತ್ತಡಕ್ಕೊಳಗಾಗಿದ್ದರು. ಇದರಿಂದ ಇಬ್ಬರೂ ಸಾಯುವ ನಿರ್ಧಾರಕ್ಕೆ ಬಂದಿದ್ದಾರೆ.

ಈ ಬಗ್ಗೆ ಡೆತ್​ನೋಟ್​ ಬರೆದಿಟ್ಟಿರುವ ಶಶಿಕಲಾ, ತಮ್ಮ ಸಾವಿಗೆ ತಾವೇ ಕಾರಣ ಎಂದು ಹೇಳಿದ್ದಾರೆ. ಅರುಣ್​ಗೆ ಕ್ಯಾನ್ಸರ್​ ಇರುವುದು ತಿಳಿದಿದೆ. ಅವರು ಬದುಕುವುದು ಕಷ್ಟ. ಆದ್ದರಿಂದ ನಾನೂ ಅವರ ಜತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಡಾಕ್ಟರ್​ ರಿಪೋರ್ಟ್​ ಟೇಬಲ್​ ಮೇಲೆ ಇಟ್ಟಿದ್ದೇವೆ. ಈ ವರದಿ ನೋಡಿದರೆ ನಾವು ಸಾಯುವುಕ್ಕೆ ಏನು ಕಾರಣ ಎಂದು ತಿಳಿಯುತ್ತದೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್​ನೋಟ್​ನಲ್ಲಿ ಬರೆಯಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net