ಫೋಟೋದಲ್ಲಿದ್ದ ಚಿನ್ನದ ಸರವೇ ಮಹಿಳೆ ಪ್ರಾಣ ಕಸಿದುಕೊಂಡಿತು! ಭೀಕರ ಪ್ರಕರಣವನ್ನು ಭೇದಿಸಿದ ಪೊಲೀಸರು

death case
Published on

ಬೆಂಗಳೂರು: ನಗರದ ಜ್ಞಾನ ಜ್ಯೋತಿ ನಗರದಲ್ಲಿ ಭೀಕರವಾಗಿ ಕೊಲೆಯಾದ ಮಹಿಳೆಯ ಪ್ರಕರಣವನ್ನು ಭೇದಿಸಿರುವ ಪೊಲೀಸರು ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ರಂಜಿತಾ ಎಂಬ 26 ವರ್ಷದ ಮಹಿಳೆಯ ಕೊಲೆ ಪ್ರಕರಣವಿದು. ರಂಜಿತಾರ ಕತ್ತಿನ ಭಾಗಕ್ಕೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ಸಾಕ್ಷಿ ನಾಶ ಪಡಿಸಲು ಯತ್ನಿಸಲಾಗಿತ್ತು. ಆರೋಪಿಗಳು ಮೃತಳ ಕೈಯಲ್ಲಿ ಚಾಕು ಇಟ್ಟು ಪರಾರಿಯಾಗಿದ್ದರು.

ಇದೀಗ ಈ ಕೊಲೆ ರಹಸ್ಯವನ್ನು ಕೆಂಗೇರಿ ಗೇಟ್ ಉಪವಿಭಾಗದ ಎಸಿಪಿ ಯು ಡಿ ಕೃಷ್ಣಕುಮಾರ್ ನೇತೃತ್ವದಲ್ಲಿ ಭೇದಿಸಲಾಗಿದ್ದು, ರಾಜಶೇಖರ ಮತ್ತು ಇಂದ್ರಮ್ಮ ಎನ್ನುವವರನ್ನು ಬಂಧಿಸಿದ್ದಾರೆ. ರಂಜಿತಾ ಅವರು ಫೋಟೋದಲ್ಲಿ ಧರಿಸಿದ್ದ ಚಿನ್ನದ ಸರಕ್ಕಾಗಿ ಈ ಆರೋಪಿಗಳು ಅವರ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಅಸಲಿಗೆ ರಂಜಿತಾ ಅವರು ತಮ್ಮ ಸಂಬಂಧಿಕರ ಸರವನ್ನು ಪಡೆದು ಅದನ್ನು ಧರಿಸಿ ಫೋಟೋ ತೆಗೆಸಿಕೊಂಡಿದ್ದರು. ಈ ಫೋಟೋ ಅನ್ನು ಅವರ ಪರಿಚಯಸ್ಥರಾಗಿದ್ದ ಇಂದ್ರಮ್ಮ ನೋಡಿದ್ದರು. ಸುಮಾರು 40 ಗ್ರಾಂ ಚಿನ್ನದ ಸರ ಅದಾಗಿತ್ತು. ಈ ಸರ ರಂಜಿತಾ ಅವರದ್ದೇ ಎಂದುಕೊಂಡು ಅದನ್ನು ಹೇಗಾದರೂ ಲಪಟಾಯಿಸಬೇಕು ಎಂದು ಹೊಂಚು ಹಾಕಿದ್ದಳು ಇಂದ್ರಮ್ಮ.

ನಂತರ ರಂಜಿತಾ ಅವರ ಪತಿ ಮನೆಯಲ್ಲಿ ಇಲ್ಲದ ವೇಳೆ ಮನೆಗೆ ಬಂದಿದ್ದಳು ಇಂದ್ರಮ್ಮ. ಈ ವೇಳೆ ರಂಜಿತಾ ಸ್ನಾನಕ್ಕೆ ಹೋಗಿದ್ದರು. ಅದೇ ವೇಳೆ ಇನ್ನೊಬ್ಬ ಆರೋಪಿ ರಾಜಶೇಖರನನ್ನು ಕರೆದಿದ್ದಾಳೆ. ಸ್ನಾನ ಮುಗಿಸಿ ಬರುತ್ತಿದ್ದಂತೆಯೇ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಕೊಲೆ ಮಾಡಿದ್ದಾರೆ. ನಂತರ ಸರಕ್ಕಾಗಿ ಎಲ್ಲೆಡೆ ಹುಡುಕಿದ್ದಾರೆ. ಅದು ಸಿಗದಿದ್ದಾಗ ಕಿವಿಯಲ್ಲಿದ್ದ ಓಲೆ ಮತ್ತು ತಾಳಿಯ ಗುಂಡಿನ ಮೇಲೆ ಕಣ್ಣು ಹೋಗಿದೆ. ಕಿವಿಯನ್ನು ಕತ್ತರಿಸಿ ಓಲೆ ತೆಗೆದುಕೊಂಡಿದ್ದಾರೆ. ಆದರೆ ಅದು ಹಿತ್ತಾಳೆಯದ್ದು ಎಂದು ತಿಳಿದಾಗ ಅಲ್ಲಿಯೇ ಎಸೆದು ಚಾಕುವನ್ನು ರಂಜಿತಾ ಕೈಗೆ ಕೊಟ್ಟು ಪರಾರಿಯಾಗಿದ್ದಾರೆ.

ಹೋಗುವಾಗ ಮೊಬೈಲ್​ ಫೋನ್​ ತೆಗೆದುಕೊಂಡು ಹೋಗಿದ್ದರು. ಅದರ ಲೊಕೇಷನ್​ ಜಾಡು ಹಿಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮೊದಲಿಗೆ ತಾವು ಕೃತ್ಯ ಎಸಗಿಲ್ಲ ಎಂದು ಹೇಳಿದ್ದರೂ ನಂತರ ಪೊಲೀಸರು ಬಾಯಿ ಬಿಡಿಸಿದಾಗ ಸತ್ಯ ಒಪ್ಪಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net