ಕರೊನಾ ಎನ್ನುವುದು ಸುಳ್ಳು ಎಂದು ‘ಬುದ್ಧಿ’ ಹೇಳುತ್ತಿದ್ದಾಕೆ ಇದೇ ವೈರಸ್‌ನಿಂದ ಸತ್ತುಹೋದಳು!

corona
Published on

ಫ್ಲೊರಿಡಾ: ಕರೊನಾ ವೈರಸ್‌ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದರೂ, ಕೆಲವರು ಇದರ ಬಗ್ಗೆ ಅಷ್ಟೊಂದು ಗಮನವೇ ಹರಿಸುತ್ತಿಲ್ಲ.

ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್‌ ಹಾಕಿಕೊಳ್ಳಿ ಎಂದೆಲ್ಲಾ ಸರ್ಕಾರ, ಪೊಲೀಸರು ಘೋಷಣೆ ಮಾಡುತ್ತಲೇ ಇದ್ದರೂ ತಮಗೇನು ಇದು ಅನ್ವಯ ಆಗುವುದಿಲ್ಲ ಎಂದುಕೊಳ್ಳುವವರೂ ಇದ್ದಾರೆ.

ಇಂಥದ್ದೇ ಒಂದು ಪ್ರಕರಣ ಫ್ಲೋರಿಡಾದಲ್ಲಿ ನಡೆದಿದೆ. ಈ ವ್ಯಕ್ತಿ ಕೂಡ ಕರೊನಾ ವೈರಸ್ಸೇ ಇಲ್ಲ, ಅದೆಲ್ಲಾ ಸುಳ್ಳು, ಯಾರೂ ಮಾಸ್ಕ್‌ ಧರಿಸಿಕೊಳ್ಳಬೇಡಿ ಎಂದು ಘೋಷಿಸುತ್ತಿದ್ದ. ಇದಕ್ಕೆ ಈತನ ಹೆಂಡತಿ ಕೂಡ ದನಿಗೂಡಿಸುತ್ತಿದ್ದಳು. ಕರೊನಾ ವೈರಸ್‌ ಸುಳ್ಳು ಎಂದು ಆಕೆಯೂ ಎಲ್ಲರಿಗೂ ಬುದ್ಧಿಮಾತು ಹೇಳುತ್ತಿದ್ದಳು.

ಇದೀಗ ಈ ಮಾತೇ ಇಬ್ಬರಿಗೂ ಮುಳುವಾಗಿದ್ದು, ಹೆಂಡತಿ ಕರೊನಾ ವೈರಸ್‌ನಿಂದ ಸತ್ತುಹೋಗಿದ್ದಾಳೆ. ಇದೀಗ ಈ ವ್ಯಕ್ತಿ ‍ಪತ್ನಿಯನ್ನು ಕಳೆದುಕೊಂಡು ಗೋಳೋ ಎನ್ನುತ್ತಿದ್ದಾನೆ.

ಇಂಥದ್ದೊಂದು ದುರಂತ ಕಂಡಿರುವುದು ಬ್ರಿಯಾನ್ ಲೀ ಹಾಗೂ ಎರಿನ್ ದಂಪತಿ. ಕರೊನಾ ಎನ್ನುವುದು ಸಾಮಾನ್ಯ ನೆಗಡಿ, ಜ್ವರ. ಇದಕ್ಕೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎನ್ನುತ್ತಿದ್ದರು. ಜತೆಗೆ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಬೇಡಿ, ಮಾಸ್ಕ್‌ ಧರಿಸಿಕೊಳ್ಳುವ ಅಗತ್ಯವಿಲ್ಲ ಎನ್ನುತ್ತಿದ್ದರು. ಅದನ್ನು ತಾವೂ ಪಾಲಿಸುತ್ತಿದ್ದರು.

ಈ ದಂಪತಿ ಎಲ್ಲೆಡೆ ಸುತ್ತಾಡಿದ್ದರಿಂದ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ಟ್ಯಾಕ್ಸಿ ಚಾಲನೆ ಮುಂದುವರೆಸಿದ್ದ ಬ್ರಿಯಾನ್‌ಗೆ ಮೊದಲು ಕರೊನಾ ಕಾಣಿಸಿಕೊಂಡಿತ್ತು. ಆದರೆ ದಂಪತಿ ಇದನ್ನು ನಿರ್ಲಕ್ಷ್ಯಿಸಿದ್ದಾರೆ. ಆಸ್ಪತ್ರೆಗೆ ಹೋಗಿ ಔಷಧಿ ಸೇವಿಸಲಿಲ್ಲ. ಬ್ರಿಯಾನ್‌ಗೆ ಜ್ವರ ಕಡಿಮೆಯಾಗಿತ್ತು. ಎರಿನ್‌ಗೆ ಜ್ವರ ಮುಂದುವರೆದು ಹೃದಯ ಸಂಬಂಧಿ ಖಾಯಿಲೆ ಕಾಣಿಸಿಕೊಂಡಿತ್ತು. ಪರಿಸ್ಥಿತಿ ಹದಗೆಟ್ಟ ನಂತ್ರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈಕೆಗೆ ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು. ವೆಂಟಿಲೇಟರ್ ಇಡಲಾಗಿತ್ತು. ಆದರೆ ಚಿಕಿತ್ಸೆ ಫಲ ನೀಡದೆ ಮೃತಪಟ್ಟಿದ್ದಾಳೆ. ಮೊದಲೇ ನಿದ್ರಾಹೀನಾತೆ, ಅಸ್ತಮಾದಿಂದ ಬಳಲ್ತಿದ್ದ ಎರಿನ್ ಗೆ ಕೊರೊನಾ ಸಾವು ಬಂದಿದೆ. ಬ್ರಿಯಾನ್ ನಿರ್ಲಕ್ಷ್ಯ ಇದಕ್ಕೆ ಕಾರಣ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net