ಗಂಡ ಕರೊನಾದಿಂದ ಮೃತಪಟ್ಟದ್ದಕ್ಕೆ ಹೆಂಡ್ತಿ ವಿರುದ್ಧ ದಾಖಲಾಯ್ತು ಎಫ್​ಐಆರ್!

corona-FIR
Published on

ಲಖಂದೂರು (ಮಹಾರಾಷ್ಟ್ರ): ಕರೊನಾ ಸೋಂಕು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇದೀಗ ರೋಗ ಲಕ್ಷಣಗಳು ಇಲ್ಲದಿದ್ದರೆ ಮನೆಯಲ್ಲಿಯೇ ಇದ್ದು, ಕೆಲವೊಂದು ಕರೊನಾ ನಿಯಮ ಪಾಲನೆ ಮಾಡುವಂತೆ ವೈದ್ಯರು ಹೇಳುತ್ತಿದ್ದಾರೆ.

ಆದರೆ ಇಲ್ಲೊಬ್ಬ ಪತ್ನಿ ಕರೊನಾ ಸೋಂಕಿತ ಗಂಡನನ್ನು ಮನೆಯಲ್ಲಿಯೇ ಇರಿಸಿಕೊಂಡು ಗಂಡನನ್ನು ಕಳೆದುಕೊಂಡದ್ದು ಮಾತ್ರವಲ್ಲದೇ, ದೊಡ್ಡ ಕೇಸನ್ನೂ ಎದುರಿಸಬೇಕಾಗಿದೆ. ಇವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದು ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಲಖಂದೂರಿನಲ್ಲಿ.

ಅಷ್ಟಕ್ಕೂ ಆಗಿದ್ದೇನೆಂದರೆ, ಮಹಿಳೆಯ ಗಂಡನಿಗೆ ಕರೊನಾ ಪಾಸಿಟಿವ್​ ಬಂದಿದೆ. ರೋಗ ಲಕ್ಷಣಗಳು ಕಾಣಿಸಿಕೊಂಡಿವೆ. ಇದರ ಗಂಭೀರತೆ ಅರಿತಿದ್ದ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ಹೇಳಿದ್ದಾರೆ. ಆದರೆ ಪತ್ನಿ ಆಸ್ಪತ್ರೆಯ ಬಿಲ್​ಗೆ ಹೆದರಿಯೋ ಅಥವಾ ಇದು ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಲ್ಲ ಎಂದುಕೊಂಡೋ ಏನೋ ಒಟ್ಟಿನಲ್ಲಿ ಗಂಡನನ್ನು ಮನೆಯಲ್ಲಿಯೇ ಇರಿಸಿಕೊಂಡಿದ್ದಾಳೆ.

ಮನೆಯಲ್ಲೇನೋ ಇರಿಸಿಕೊಂಡಳು. ಆದರೆ ಗಂಡನಿಗೆ ಸರಿಯಾದ ಚಿಕಿತ್ಸೆ ಸಿಗಲಿಲ್ಲ. ಇದರಿಂದ ಆತ ಮೃತಪಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ, ವೈದ್ಯಾಧಿಕಾರಿಗಳು ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾರೆ. ಮಹಿಳೆ ತನ್ನ ಪತಿ ಬಗ್ಗೆ ಹೆಚ್ಚು ಕಾಳಜಿ ವಹಿಸದೆ ನಿರ್ಲಕ್ಷ್ಯ ತೋರಿದ್ದು ಸಾವಿಗೆ ಕಾರಣ ಎಂದು ಆಕೆಯ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಮಹಿಳೆ ಕರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ನಿಯಮ ಉಲ್ಲಂಘನೆ ಮಾಡಿದರೆ ಎಲ್ಲರಿಗೂ ಶಿಕ್ಷೆಯಾಗಲಿದೆ ಎಂದಿದ್ದಾರೆ ಪೊಲೀಸರು. ಕರೊನಾ ಸಾವಿಗೆ ಕುಟುಂಬಸ್ಥರನ್ನು ಕಾರಣ ಮಾಡಿ ದೂರು ದಾಖಲಿಸಿದ ಮೊದಲ ಪ್ರಕರಣ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net