ಕಂದನಿಗೆ ಮುಳುವಾಯ್ತು ಕಂಟೈನ್‌ಮೆಂಟ್‌ ಜೋನ್‌! ನಾಣ್ಯ ನುಂಗಿದರೂ ಚಿಕಿತ್ಸೆ ಕೊಡಲಿಲ್ಲ...

child
Published on

ಕೊಚ್ಚಿ: ಕರೊನಾ ವೈರಸ್‌ ಹೆಚ್ಚಾಗಿರುವ ಪ್ರದೇಶದಿಂದ ಬಂದ ಮಗುವೊಂದಕ್ಕೆ ಚಿಕಿತ್ಸೆ ನೀಡಲು ನಿರಾಕರಿಸಿದ ಕಾರಣ, ಅದು ಪ್ರಾಣ ಕಳೆದುಕೊಂಡಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.

ಮೂರು ವರ್ಷದ ಮಗು ಈ ದುರ್ದೈವಿ. ಈತ ಆಟವಾಡುತ್ತಿದ್ದ ವೇಳೆ ನಾಣ್ಯವನ್ನು ನುಂಗಿಬಿಟ್ಟಿದ್ದಾನೆ. ಕೂಡಲೇ ಈತನನ್ನು ಆಸ್ಪತ್ರೆಗೆ ಪಾಲಕರು ಕರೆದುಕೊಂಡು ಹೋದರೂ ಆತನಿಗೆ ಅಲ್ಲಿ ಚಿಕಿತ್ಸೆ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರು ಆರೋಪಿಸುತ್ತಿದ್ದಾರೆ.

ಅಷ್ಟಕ್ಕೂ ಈ ಬಾಲಕನಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದು ಏಕೆಂದರೆ ಈತ ವಾಸವಿದ್ದುದು ಕಂಟೈನ್‌ಮೆಂಟ್‌ ಜೋನ್‌ನಲ್ಲಿ. ಅಲುವಾ ಬಳಿಯ ಕೊಡುಂಗಲ್ಲೂರ್‌ನಲ್ಲಿ ಬಾಲಕನ ಕುಟುಂಬ ವಾಸಿಸುತ್ತಿದೆ. ಇಲ್ಲಿ ಕರೊನಾ ಹಾವಳಿ ಹೆಚ್ಚಾಗಿರುವ ಕಾರಣ, ಇದನ್ನು ಕಂಟೈನ್‌ಮೆಂಟ್‌ ಜೋನ್‌ ಎಂದು ಗುರುತಿಸಲಾಗಿದೆ.

ಹೀಗಾಗಿ ಆಸ್ಪತ್ರೆಯಲ್ಲಿ ಬಾಲಕನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರು. ಆದ್ದರಿಂದ ಚಿಕಿತ್ಸೆ ಸಿಗದೆ ಬಾಲಕ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಶನಿವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಮನೆಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾಲಕ ನಾಣ್ಯವನ್ನು ನುಂಗಿದ್ದಾನೆ. ಸ್ವಲ್ಪ ಸಮಯದ ನಂತರ ಬಾಲಕ ಅಸ್ವಸ್ಥನಾಗಿದ್ದಾನೆ. ತಕ್ಷಣ ಪೋಷಕರು ಮಗುವನ್ನು ಅಲುವಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಎಕ್ಸ ರೇ ಮಾಡಿದ್ದು, ನಾಣ್ಯವಿರುವ ಬಗ್ಗೆ ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ.

ಅಲ್ಲಿ ಮಕ್ಕಳ ತಜ್ಞರು ಇಲ್ಲವೆಂದು ಬಾಲಕನನ್ನು ದಾಖಲಿಸಿಕೊಂಡಿಲ್ಲ. ನಂತರ ಪಾಲಕರು ಎರ್ನಾಕುಲಂ ಜನರಲ್ ಆಸ್ಪತ್ರೆಗೆ ಹೋದರು. ಮಗುವನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಅಲ್ಲಿ ಹೇಳಲಾಯಿತು. ಅಲ್ಲಿಯೂ ಬಾಲಕನ್ನು ಅಡ್ಮಿಟ್ ಮಾಡಿಕೊಳ್ಳಲಿಲ್ಲ. ಬದಲಿಗೆ ಮಗುವಿಗೆ ಹಣ್ಣುಗಳನ್ನು ನೀಡಿದರೆ ಸರಿಯಾಗುತ್ತದೆ ಎಂದಿದ್ದಾರೆ.

ಪಾಲಕರು ಮಗುವನ್ನು ತಮ್ಮ ಮನೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಸಂಜೆಯ ವೇಳೆಗೆ ಬಾಲಕನ ಸ್ಥಿತಿ ಗಂಭೀರವಾಗಿದೆ. ಇದರಿಂದ ಗಾಬರಿಯಾದ ಪೋಷಕರು ಮತ್ತೆ ಅಲುವಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಮಾರ್ಗದಲ್ಲಿಯೇ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ. “ನಾಣ್ಯ ನುಂಗಿ ಬಾಲಕ ಮೃತಪಟ್ಟ ಘಟನೆ ಅತ್ಯಂತ ದುರದೃಷ್ಟಕರ ಎಂದು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಈ ಪ್ರಕರಣ ಕುರಿತು ಸಮಗ್ರ ವಿಚಾರಣೆಯ ನಂತರ ವರದಿಯನ್ನು ಸಲ್ಲಿಸುವಂತೆ ಪ್ರಧಾನ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ. ಆರೋಪ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net