VIDEO: ರಾಹುಲ್‌ಗಾಂಧಿಗೆ ಸಪೋರ್ಟ್‌ ಮಾಡಲು "ಟ್ವಿಟರ್‌ ಬರ್ಡ್‌" ಫ್ರೈ ಮಾಡಿದ ಕಾರ್ಯಕರ್ತರು!

twitterbird
Published on

ಹೈದರಾಬಾದ್: ದೆಹಲಿ ಅತ್ಯಾಚಾರ ಸಂತ್ರಸ್ತೆ ಮತ್ತು ಅವರ ಕುಟುಂಬದ ಗುರುತು ಸಿಗುವಂತೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಕ್ಕೆ ಕಾಂಗ್ರೆಸ್‌ ಮುಖಂಡ, ಸಂಸದ ರಾಹುಲ್‌ ಗಾಂಧಿಯವರ ಟ್ವಿಟರ್‌ ಖಾತೆಯನ್ನು ಬ್ಯಾನ್‌ ಮಾಡಲಾಗಿದೆ.

ಮಕ್ಕಳ ಹಕ್ಕುಗಳ ಕಾಯ್ದೆಯನ್ನು ಉಲ್ಲಂಘಿಸಿ ಇವರು ಗಂಭೀರ ಅಪರಾಧ ಎಸಗಿದ್ದಾರೆ ಎಂದು ಟ್ವಿಟರ್‌ ಈ ಕ್ರಮ ತೆಗೆದುಕೊಂಡಿದೆ.

ಇದನ್ನು ವಿರೋಧಿಸಿ ಕಾಂಗ್ರೆಸ್‌ನ ಮಾಜಿ ಸಂಸದನ ಮಗ ಸೇರಿದಂತೆ ಕೆಲ ಕಾರ್ಯಕರ್ತರು ಅಪರೂಪದ ಟ್ವಿಟರ್‌ ಬರ್ಡ್‌ಗಳನ್ನು ಕೊಂದು ಫ್ರೈ ಮಾಡಿ ಅದನ್ನು ದೆಹಲಿ ಮತ್ತು ಗುರುಗ್ರಾಮದಲ್ಲಿ ಇರುವ ಟ್ವಿಟರ್‌ ಸಂಸ್ಥೆಗೆ ಪಾರ್ಸೆಲ್‌ ಮಾಡಿದ್ದಾರೆ. ಈ ಮೂಲಕ ತಾವು ಪ್ರತಿಭಟನೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಟ್ವಿಟರ್‌ ಪಕ್ಷಿಗಳನ್ನು ಫ್ರೈ ಮಾಡುತ್ತಿರುವ ವಿಡಿಯೋ ಅನ್ನು ಕಾಂಗ್ರೆಸ್‌ ನಾಯಕ ಜಿ.ವಿ.ಶ್ರೀರಾಜ್‌ ಎಂಬುವವರು ಶೇರ್‌ ಮಾಡಿಕೊಂಡಿದ್ದಾರೆ. ಮಾಜಿ ಸಂಸದ ಹರ್ಷ ಕುಮಾರ್ ಅವರ ಪುತ್ರ ಸಾಂಕೇತಿಕವಾಗಿ 'ಟ್ವಿಟರ್ ಬರ್ಡ್' ಫ್ರೈ ಮಾಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

'ಟ್ವಿಟರ್‌ ಡಿಷ್ ಸಿದ್ಧವಾಗುತ್ತಿದೆ' ಎಂದು ಹೇಳಿಕೊಂಡಿರುವ ಕಾರ್ಯಕರ್ತರು 'ಡೌನ್ ಡೌನ್ ಬಿಜೆಪಿ' ಎಂದು ಘೋಷಣೆ ಕೂಗಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

2015ರಲ್ಲಿ ಎನ್‌.ರಘುವೀರ ರೆಡ್ಡಿ ಅವರು ರಾಜ್ಯ ಕಾಂಗ್ರೆಸ್‌ ಮುಖ್ಯಸ್ಥರಾಗಿದ್ದ ವೇಳೆ ಅವರಿಗೆ ಸ್ವಾಗತ ಕೋರಲು ಪಾರಿವಾಳದ ಹೊಟ್ಟೆಯಲ್ಲಿ ದೀಪಾವಳಿ ರಾಕೆಟ್‌ ಇಟ್ಟು ಬಿಟ್ಟು ಖುಷಿಪಟ್ಟಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಇಂದು ಟ್ವಿಟರ್‌ ‍ಪಕ್ಷಿಗಳನ್ನು ಕೊಂದಿರುವುದಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಹಿಂದೆ ಗೋಮಾಂಸವನ್ನು ನಿಷೇಧ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿರುವುದನ್ನು ವಿರೋಧಿಸಿ ಕೆಲವು ಕಾರ್ಯಕರ್ತರು ನಡುರಸ್ತೆಯಲ್ಲಿ ಕರುವನ್ನು ಕೊಂದು ತಿಂದಿದ್ದರು.

ಇಲ್ಲಿದೆ ನೋಡಿ ಕಾರ್ಯಕರ್ತರ ಪ್ರತಿಭಟನೆ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net