

ಧಾರವಾಡ: ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ನಡೆಯುತ್ತಿರುವ ಅಕ್ರಮ ವಿಚಾರ ಭಾರಿ ಕೋಲಾಕಲವನ್ನೇ ಸೃಷ್ಟಿಸಿರುವ ಬೆನ್ನಲ್ಲೇ ಇದೀಗ ಕೆಪಿಎಸ್‌ಸಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.
2015ರ ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ದೂರು ಸಲ್ಲಿಕೆಯಾಗಿದೆ.
ಧಾರವಾಡದ ರಮೇಶ ತನಿಕೆದಾರ್ ಎಂಬುವವರು ದೂರು ದಾಖಲು ಮಾಡಿದ್ದಾರೆ. ರಮೇಶ್ ಅವರು 2015ರ ಗೆಜೆಟೆಡ್ ಪ್ರೋಬೇಷನರ್ ಹುದ್ದೆ ಆಯ್ಕೆಯಿಂದ ವಂಚಿತರಾಗಿದ್ದು ಇದೀಗ ದೂರು ಸಲ್ಲಿಸಿದ್ದಾರೆ.
ಪರೀಕ್ಷೆ ಚೆನ್ನಾಗಿ ಮಾಡಿದರೂ ಆಯ್ಕೆಯಾಗದ ಹಿನ್ನೆಲೆಯಲ್ಲಿ ಸಂದೇಹಗೊಂಡ ಅವರು ತಮ್ಮ ಉತ್ತರ ಪತ್ರಿಕೆಯ ದೃಢೀಕೃತ ಪ್ರತಿ ಕೇಳಿದ್ದರು. ಈ ಸಂಬಂಧ ಆರ್‌ಟಿಐ ಅಡಿ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಕೆಪಿಎಸ್‌ಪಿ ಉತ್ತರ ಪತ್ರಿಕೆ ನೀಡದೇ ಏನೇನೋ ಸಮಜಾಯಿಸಿ ನೀಡಿತ್ತು.
ಇದರಿಂದ ನೊಂದುಕೊಂಡಿದ್ದ ರಮೇಶ್ ಅವರು, ನಿರಂತರ ಹೋರಾಟ ನಡೆಸಿದ್ದರು. ಈಗ ಒಂದೊಂದೇ ನೇಮಕಾಯಿ ಅಕ್ರಮಗಳು ಬಯಲಾಗುತ್ತಿರೋ ಹಿನ್ನೆಲೆಯಲ್ಲಿ 2015ರ ಗೆಜೆಟೆಡ್ ಪ್ರೋಬೇಷನರ್ಸ್ ನೇಮಕಾತಿ ಪರಿಶೀಲಿಸುವಂತೆ ಮುಖ್ಯಮಂತ್ರಿಯ ಮೊರೆ ಹೋಗಿದ್ದಾರೆ.
ಈ ಸಂದರ್ಭದಲ್ಲಿ ಒಟ್ಟು 428 ಹುದ್ದೆಗೆ ನೇಮಕಾತಿ ನಡೆದಿತ್ತು. 2017ರ ಅಗಸ್ಟ್‌ನಲ್ಲಿ ಪೂರ್ವಭಾವಿ, ಡಿಸೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು 2019ರ ಅಕ್ಟೋಬರ್‌ವರೆಗೆ ಸಂದರ್ಶನವಾಗಿತ್ತು, ಅದೇ ಡಿಸೆಂಬರ್‌ನಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆಯಾಗಿತ್ತು. 2020ರ ಜನವರಿಯಲ್ಲಿ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆಯಾಗಿತ್ತು. ಅದರಲ್ಲಿ ಹೆಸರು ಇಲ್ಲದೇ ಇರುವುದನ್ನು ನೋಡಿದ ರಮೇಶ್ ಆರ್‌ಟಿಐ ಅಡಿ ಅರ್ಜಿ ಹಾಕಿದ್ದರು.
ಆದರೆ ಬೇರೆ ಬೇರೆ ಪ್ರಕರಣ ಉದಾಹರಿಸಿ ಕೆಪಿಎಸ್‌ಸಿ ಉತ್ತರ ಪತ್ರಿಕೆ ನೀಡಿರಲಿಲ್ಲ. ಅಂಗೇಶ ಎಂಬುವವರ ಪ್ರಕರಣವನ್ನು ಕೆಪಿಎಸ್‌ಸಿ ಉಲ್ಲೇಖಿಸಿತ್ತು. ಆದರೆ ನಿಜವಾಗಿ ನೋಡುವುದಾದರೆ ಅಂಗೇಶ ಬೇರೆಯವರ ಉತ್ತರ ಪತ್ರಿಕೆ ಕೇಳಿದ್ದರು.ಆದರೆ ರಮೇಶ ಖುದ್ದು ತನ್ನದೇ ಉತ್ತರ ಪತ್ರಿಕೆ ಕೇಳಿದ್ದರು
ಬೇರೆಯವರ ಉತ್ತರ ಪತ್ರಿಕೆ ಆರ್‌ಟಿಐ ಅಡಿ ಕೇಳಲು ಬರೊಲ್ಲ. ಆದರೆ ಪರೀಕ್ಷೆ ಬರೆದವರು ತಮ್ಮ ಉತ್ತರ ಪತ್ರಿಕೆ ಕೇಳಬಹುದೆಂಬ ನಿಯಮವಿದೆ. ಆದರೂ ಉತ್ತರ ಪತ್ರಿಕೆಯನ್ನು ಕೆಪಿಎಸ್‌ಸಿ ನೀಡಿರಲಿಲ್ಲ. 2008, 2010, 2011, 2014ರ ನೇಮಕಾತಿ ಉತ್ತರ ಪತ್ರಿಕೆಗಳನ್ನು ಕೆಪಿಎಸ್‌ಸಿ ನೀಡಿದ್ದರೂ, 2015ರ ಉತ್ತರ ಪತ್ರಿಕೆಗಳನ್ನು ನೀಡಲು ಮಾತ್ರ ಹಿಂದೇಟು ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಇಂದಿಗೂ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ ರಮೇಶ್. ಇವರ ದೂರಿನ ಆಧಾರದ ಮೇಲೆ ಯಾವ ರೀತಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆಯೋ ಕಾದುನೋಡಬೇಕಿದೆ. ಇದಾಗಲೇ ಕೆಪಿಎಸ್‌ಸಿ ವಿರುದ್ಧ ಕೆಲ ಹಗರಣಗಳು ಕೇಳಿಬಂದಿದ್ದು, ಸುದೀರ್ಘ ಕಾಲ ಕೋರ್ಟ್‌ನಲ್ಲಿ ಕೂಡ ವಿಚಾರಣೆ ನಡೆದಿರುವುದು ಇಲ್ಲಿ ಉಲ್ಲೇಖಾರ್ಹ. (ದಿಗ್ವಿಜಯ ನ್ಯೂಸ್)