

ಛತ್ತೀಸಗಢ: ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪ ಹೊತ್ತ ಛತ್ತೀಸಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆ ನಂದ ಕುಮಾರ್ ಬಘೇಲ್ (86) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇತ್ತೀಚೆಗೆ ಉತ್ತರಪ್ರದೇಶಕ್ಕೆ ಭೇಟಿ ನೀಡಿದ್ದ ನಂದಕುಮಾರ್ ಅವರು, ಮತದಾರರನ್ನು ಉದ್ದೇಶಿಸಿ, ಬ್ರಾಹ್ಮಣರನ್ನು ಗಂಗಾ ನದಿಯಿಂದ ವೋಲ್ಗಾಗೆ ಕಳುಹಿಸಬೇಕು. ಅವರು ವಿದೇಶಿಯರು. ಅವರು ನಮ್ಮ ದೇಶಕ್ಕೆ ಬಂದು ನಮ್ಮನ್ನೇ ಅಸ್ಪ್ರಶ್ಯರು ಎಂದು ಹೇಳುತ್ತಾರೆ. ಅವರು ನಮ್ಮ ಸರ್ವ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಆದ್ದರಿಂದ ಇಂಥ ಬ್ರಾಹ್ಮಣರು ನಮ್ಮ ಹಳ್ಳಿಯನ್ನು ಪ್ರವೇಶ ಮಾಡಬಾರದು. ಆದ್ದರಿಂದ ನಿಮ್ಮ ಹಳ್ಳಿಗಳಲ್ಲಿ ಅವರು ಪ್ರವೇಶ ಮಾಡದಂತೆ ತಡೆಹಿಡಿಯಿರಿ ಎಂದಿದ್ದರು. ಇತರ ಸಮಾಜದ ಜನರೊಂದಿಗೆ ತಾವು ಈ ವಿಷಯವಾಗಿ ಮಾತನಾಡಲಿದ್ದು, ಎಲ್ಲರೂ ಒಗ್ಗೂಡಿ ಬ್ರಾಹ್ಮಣರನ್ನು ಗ್ರಾಮಗಳಿಂದ ಬಹಿಷ್ಕರಿಸೋಣ ಎಂದು ಕರೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿತ್ತು. ಒಂದು ಸಮಯದಾಯದ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರಿಂದ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಇನ್ನು ತಮ್ಮ ತಂದೆಯ ನಡವಳಿಕೆಗೆ ಖುದ್ದು ಮುಖ್ಯಂತ್ರಿ ಭೂಪೇಶ್ ಬಘೇಲ್ ವಿಷಾದಿಸಿದ್ದಾರೆ. ತಂದೆಯ ಬಂಧನದ ಕುರಿತಂತೆ ಟ್ವೀಟ್ ಮಾಡುವ ಮೂಲಕ ಅವರು ಪ್ರತಿಕ್ರಿಯೆ ನಡೆದಿದ್ದು, ನನ್ನ ಸರ್ಕಾರದಲ್ಲಿ ಯಾರೂ ಕಾನೂನನ್ನು ಮೀರುವಂತಿಲ್ಲ. ಅವರು ನನ್ನ ತಂದೆಯಾಗಿದ್ದರೂ, ಅವರು ಕೂಡ ಕಾನೂನಿನ ಮುಂದೆ ತಲೆಬಾಗಲೇ ಬೇಕು. ಮುಖ್ಯಮಂತ್ರಿಯಾಗಿ ವಿವಿಧ ಸಮುದಾಯಗಳ ನಡುವೆ ಸಾಮರಸ್ಯವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಅವರು ಒಂದು ಸಮುದಾಯದ ವಿರುದ್ಧ ಟೀಕೆ ಮಾಡಿದ್ದರೆ, ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಇದಕ್ಕೆ ಕಾನೂನು ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನನ್ನ ಮತ್ತು ತಂದೆಯ ರಾಜಕೀಯ ಆಲೋಚನೆಗಳು ಮತ್ತು ನಂಬಿಕೆಗಳು ವಿಭಿನ್ನವಾಗಿವೆ. ನಾನು ಅವರ ಮಗನಾಗಿ ಅವರನ್ನು ಗೌರವಿಸುತ್ತೇನೆ. ಆದರೆ ಮುಖ್ಯಮಂತ್ರಿಯಾಗಿ, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಇಂತಹ ತಪ್ಪುಗಳಿಗಾಗಿ ನಾನು ಅವರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದಿದ್ದಾರೆ.