

ರಾಮನಗರ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರಾಮನಗರದ ಕೆರೆಗಳು ತುಂಬಿ ಹರಿಯುತ್ತಿವೆ. ಇದೇ ಸಮಯದಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ನೆಲಗುಳಿ ಕೆರೆ ಸಮೀಪ ಕಾರೊಂದು ಕೆರೆಗೆ ಪಲ್ಟಿ ಮೂವರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ.
ಕಾರಿನಲ್ಲಿ ಐವರು ಯುವಕರಿದ್ದು, ಅವರ ಪೈಕಿ ಮೂವರು ಯುವಕರು ಮೃತಪಟ್ಟಿದ್ದಾರೆ. ಸ್ಥಳದಲ್ಲೇ ಇಬ್ಬರ ಮೃತದೇಹ ನಿನ್ನೆ ಪತ್ತೆಯಾಗಿತ್ತು. ಇನ್ನೋರ್ವ ಯುವಕನಿಗಾಗಿ ಬಹಳ ಹುಡುಕಾಟ ನಡೆದಿತ್ತು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಿಂದ ಮೂರನೇ ಯುವಕನ ಮೃತದೇಹ ಕೂಡ ಪತ್ತೆಯಾಗಿದೆ.
ಪುಂಡಲೀಕ್, ಕಲ್ಲಪ್ಪ, ಕಿರಣ್ ಮೃತ ಯುವಕರು. ಈ ಪೈಕಿ ಈಗ ಪತ್ತೆಯಾಗಿರುವ ಮೃತದೇಹ ಕಿರಣ್‌ದಾಗಿದ್ದು, ಈತ ಬೀದರ್ ಜಿಲ್ಲೆಯವನು ಎನ್ನಲಾಗಿದೆ. ಮತ್ತಿಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಈ ಯುವಕರು ಯುಜಿಸಿಎಲ್ ಎಂಬ ಎಂಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು. ಕಗ್ಗಲೀಪುರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನಿಖೆ ನಡೆಸಲಾಗುತ್ತಿದೆ.