ನಿಜವಾಗ್ಲೂ ಲವ್‌ ಮಾಡೋದೇ ಆದ್ರೆ ಒಂಟೆಮರಿ ಗಿಫ್ಟ್‌ ಕೊಡು ಅಂದ್ಲು ಪ್ರೇಯಸಿ... ಅಷ್ಟೇ... ಪ್ರೇಮಿಗಳೀಗ ಜೈಲಲ್ಲಿ!

camel
Published on

ದುಬೈ: ಪ್ರೀತಿಗೆ ಬಿದ್ದಾಗ ಪ್ರೇಯಸಿ ಹೇಳಿದಂತೆ ಯುವಕರು ಕೇಳಲೇಬೇಕಾಗುತ್ತದೆ. ಹಾಗೆ ಕೆಲವು ಯುವತಿಯರೂ ಇದನ್ನೇ ಬಂಡವಾಳ ಮಾಡಿಕೊಂಡು ತಮ್ಮ ಆಸೆಗಳನ್ನೆಲ್ಲಾ ಈಡೇರಿಸಿಕೊಳ್ಳುವುದೂ ಇದೆ. ಇಂಥ ಸಂದರ್ಭಗಳಲ್ಲಿ ಪೇಚಿಗೆ ಸಿಲುಕುವ ಯುವಕರು ಸ್ನೇಹಿತೆ ಎಲ್ಲಿ ಕೈತಪ್ಪಿ ಹೋಗುತ್ತಾಳೋ ಎಂದು ಪರದಾಡುವ ವಿಷಯ ಹೊಸತೇನಲ್ಲ.

ಇಂಥದ್ದೇ ಒಂದು ಘಟನೆ ದುಬೈನಲ್ಲಿ ನಡೆದಿದೆ. ಈ ಸುದ್ದಿಯೀಗ ಭಾರಿ ವೈರಲ್‌ ಆಗಿದೆ. ಹೀಗೆ ಪ್ರೀತಿಯ ಬಲೆಗೆ ಬಿದ್ದು, ಪ್ರೇಯಸಿ ಹೇಳಿದಂತೆ ಕೇಳಿ ಯುವಕನೊಬ್ಬ ಜೈಲು ಪಾಲಾಗಿರುವ ಘಟನೆ ಇದು. ಯುವಕನ ಜತೆ ಯುವತಿಯೂ ಕಂಬಿ ಎಣಿಸುತ್ತಿದ್ದಾಳೆ.

ಅಷ್ಟಕ್ಕೂ ಈ ಪ್ರೇಯಸಿ ತನ್ನ ಪ್ರೇಮಿಗೆ ಇಟ್ಟಿರುವ ಬೇಡಿಕೆ ಎಂದರೆ ತನಗೊಂದು ಒಂಟೆಮರಿ ಬೇಕು ಎಂದು! ನೀನು ನನ್ನನ್ನು ನಿಜವಾಗಿಯೂ ಪ್ರೀತಿಸುವುದೇ ಆದರೆ ನನಗೊಂದು ಒಂಟೆಮರಿಯನ್ನು ಗಿಫ್ಟ್‌ ಕೊಡು ಎಂದಿದ್ದಾರೆ. ಆಕೆಯ ಹುಟ್ಟುಹಬ್ಬದಂದು ಏನು ಗಿಫ್ಟ್‌ ಬೇಕು ಎಂದು ಈ ಯುವಕ ಆಕೆಯನ್ನು ಒಲಿಸಲು ಕೇಳಿದಾಗ, ಇಂಥದ್ದೊಂದು ಬೇಡಿಕೆ ಇಟ್ಟಿದ್ದಾಳೆ ಯುವತಿ!

ಒಂಟೆ ಮರಿ ಖರೀದಿ ಎಂದರೆ ಸುಲಭವೆ? ಕೈಯಲ್ಲಿ ಕೆಲಸವಿಲ್ಲದ ಈ ಯುವಕನಿಗೆ ಪ್ರೇಯಸಿಯ ಮಾತು ಕೇಳದೇ ಬೇರೆ ವಿಧಿ ಇರಲಿಲ್ಲ. ಹೇಗಾದರೂ ಮಾಡಿ ಆಕೆಗೊಂದು ಒಂಟೆ ಮರಿ ಗಿಫ್ಟ್‌ ಕೊಡುವ ಪಣತೊಟ್ಟ. ಅದಕ್ಕಾಗಿ ಆತ ಮೂರ್ನಾಲ್ಕು ಕಿ.ಮೀ. ದೂರ ಇರುವ ತೋಟದ ಮನೆಯೊಳಕ್ಕೆ ನುಗ್ಗಿ ಆ ಮನೆಯಿಂದ ಒಂಟೆ ಮರಿಯನ್ನು ಕದ್ದು ತಂದು ಪ್ರೇಯಸಿಗೆ ನೀಡಿದ್ದಾನೆ.

ಇತ್ತ ಪ್ರೇಯಸಿಗೆ ಒಂದೆಡೆ ಒಂಟೆಮರಿ ಸಿಕ್ಕ ಖುಷಿ, ಇನ್ನೊಂದೆಡೆ ತನಗೆ ಇಷ್ಟು ಒಳ್ಳೆಯ ಗೆಳೆಯ ಸಿಕ್ಕ ಖುಷಿ. ಆಕೆಯ ನಗುಮೊಗ ನೋಡಿ ಈತನಿಗೆ ಖುಷಿ.

ಆದರೆ ಈ ಜೋಡಿಗಳ ಖುಷಿ ಬಹುದಿನ ಇರಲಿಲ್ಲ. ಏಕೆಂದರೆ ಅತ್ತ ಒಂಟೆ ಮಾಲೀಕ ಒಂಟೆ ಮರಿ ಕಳುವಾಗಿರುವ ಬಗ್ಗೆ ದೂರು ದಾಖಲು ಮಾಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಷ್ಟು ಹುಡುಕಿದರೂ ಒಂಟೆ ಸಿಗಲಿಲ್ಲ. ಒಂಟೆಯನ್ನು ಯಾರೋ ಕದ್ದಿರಬೇಕೆಂದು ಶಂಕಿಸಿದ ಅವರು ಈ ಬಗ್ಗೆ ತನಿಖೆ ಕೈಗೊಂಡರು. ಒಂಟೆ ಮರಿಯ ಕಳುವಿನ ವಿಷಯ ಸುತ್ತಮುತ್ತ ಹರಡಿತು.

ಅದೊಂದು ದಿನ ಈ ಒಂಟೆ ಮರಿ ಜಮೀನೊಂದರಲ್ಲಿ ಮೇಯುತ್ತಿತ್ತು. ಅದನ್ನು ನೋಡಿದ ಜಮೀನಿನ ಮಾಲೀಕ ಸಂದೇಹಗೊಂಡು ಪೊಲೀಸರಲ್ಲಿ ದೂರು ದಾಖಲು ಮಾಡಿದರು. ಪೊಲೀಸರು ಸ್ಥಳಕ್ಕೆ ಧಾವಿಸಿದರೂ ಕದ್ದ ಒಂಟೆಯ ಮರಿ ಅಲ್ಲಿಂದ ಸುಮಾರು ಮೂರ್ನಾಲ್ಕು ಕಿಲೋ ಮೀಟರ್‌ ದೂರ ಇರುವ ಕಾರಣ, ಇದು ಅದೇ ಕಳುವಾದ ಮರಿ ಇರಲಿಕ್ಕಿಲ್ಲ ಎಂದುಕೊಂಡರು (ಇದರ ಅರ್ಥ ಅಷ್ಟು ಭಾರದ ಒಂಟೆಮರಿಯನ್ನು ಅಷ್ಟು ದೂರ ಪ್ರೇಯಸಿಗಾಗಿ ಹೊತ್ತು ತಂದಿದ್ದ ಈ ಪ್ರೇಮಿ!)

ಆದರೂ ಸಂದೇಹಗೊಂಡ ಪೊಲೀಸರು ತನಿಖೆ ಮುಂದುವರಿಸಿದಾಗ ಯುವಕ ಸಿಕ್ಕಿಬಿದ್ದಿದ್ದಾನೆ. ಹೆದರುತ್ತಲೇ ಎಲ್ಲಾ ವಿಷಯ ಬಾಯಿ ಬಿಟ್ಟಿದ್ದಾನೆ. ಪ್ರೇಯಸಿಗಾಗಿ ಹೀಗೆ ಮಾಡಿರುವುದಾಗಿ ಹೇಳಿದ್ದಾನೆ. ತನ್ನ ಕಥೆ ಕೇಳಿ ಪೊಲೀಸರು ಅಯ್ಯೋ ಪಾಪ ಎಂದುಕೊಳ್ಳಬಹುದು ಎಂದುಕೊಂಡ ಯುವಕ.

ಆದರೆ ಅದು ದುಬೈ. ಅಪರಾಧಿ ಯಾರೇ ಆಗಿದ್ದರೂ ಶಿಕ್ಷೆ ಕಟ್ಟಿಟ್ಟದ್ದೇ. ಒಂಟೆ ಕಳುವು ಮಾಡಿದ ಯುವಕನ ಜತೆ, ಅದಕ್ಕೆ ಪ್ರಚೋದನೆ ನೀಡಿದ ಆತನ ಗೆಳತಿ ಇಬ್ಬರನ್ನೂ ಜೈಲಿಗೆ ತಳ್ಳಿದ್ದು, ವಿಚಾರಣೆ ನಡೆಯುತ್ತಿದೆ. ಒಂಟೆಯನ್ನು ಅದರ ಮಾಲೀಕರಿಗೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net