ಖ್ಯಾತ ಉದ್ಯಮಿಯ ಕಾರು ಅಪಘಾತಕ್ಕೆ ಭಾರಿ ಟ್ವಿಸ್ಟ್‌: ಮರಣೋತ್ತರ ಪರೀಕ್ಷೆಯಿಂದ ಬಯಲಾಯ್ತು ಸಾವಿನ ರಹಸ್ಯ!

murder
Published on

ಲಖನೌ: ಎರಡು ವಾರಗಳ ಹಿಂದೆ ಉತ್ತರ ಪ್ರದೇಶದ ಅಂಬೇಡ್ಕರ್​ನಗರದ ಹೆದ್ದಾರಿಯಲ್ಲಿ ಪ್ರಸಿದ್ಧ ಉದ್ಯಮಿ ಸಂಜಯ್​ ವರ್ಮಾ ಅವರ ಶವವು ಕಾರಿನೊಳಗೆ ಪತ್ತೆಯಾಗಿತ್ತು. ನಿಂತಿರುವ ಟ್ರಕ್‌ಗೆ ಈ ಕಾರು ಡಿಕ್ಕಿಹೊಡೆದದ್ದರಿಂದ ಸಾವು ಸಂಭವಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು, ವರ್ಮಾ ಅವರು ಮದ್ಯಪಾನ ಮಾಡಿರುವುದು ಕೂಡ ತಿಳಿದ ಹಿನ್ನೆಲೆಯಲ್ಲಿ, ಕುಡಿದು ಕಾರು ಚಾಲನೆ ಮಾಡಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದೇ ಪೊಲೀಸರು ಅಂದುಕೊಂಡಿದ್ದರು.

ಆದರೆ ಈ ಸಾವಿನ ರಹಸ್ಯವನ್ನು ಮರಣೋತ್ತರ ಪರೀಕ್ಷೆ ಭೇದಿಸಿದೆ. ಅಸಲಿಗೆ ಈ ಅಪಘಾತ ಆಗುವ ಮುನ್ನ ವರ್ಮಾ ಅವರ ಉಸಿರುಗಟ್ಟಿಸಿರುವುದು ಪರೀಕ್ಷೆಯಿಂದ ತಿಳಿದುಬಂದಿದೆ. ಈ ಸ್ಫೋಟಕ ವರದಿ ಬರುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು ಈ ರಹಸ್ಯ ಭೇದಿಸಲು ಸಾಕಷ್ಟು ಶ್ರಮ ವಹಿಸಿದ್ದು, ಇದೀಗ ರಹಸ್ಯ ಬಹಿರಂಗಗೊಂಡಿದೆ. ಇದು ಅಪಘಾತದ ಸಾವಲ್ಲ, ಬದಲಿಗೆ ಇದು ಕೊಲೆ ಎನ್ನುವುದು ತಿಳಿದುಬಂದಿದೆ. ಉಸಿರುಕಟ್ಟಿಸಿದದ ನಂತರ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ತಿಳಿದಿದೆ.

ತನಿಖೆ ಶುರು ಮಾಡಿದ ಪೊಲೀಸರಿಗೆ ಸಂಜಯ್‌ ಅವರ ಆತ್ಮೀಯ ಸ್ನೇಹಿತನಾಗಿದ್ದ ಪ್ರವೀಣ್​ ಪಟೇಲ್​ ಮತ್ತು ಆತನ ಸಹಾಯಕನೇ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದ ಹಿನ್ನೆಲೆಯಲ್ಲಿ ಅವರ ಬೆನ್ನಟ್ಟಿ ಹೋದಾಗ ಸಂಚು ಬಯಲಿಗೆ ಬಂದಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಅಸಲಿಗೆ ಉದ್ಯಮಿ ಸಂಜಯ್‌ ಅವರ ಕೊಲೆ ಮಾಡಿದ್ದು, ಪ್ರವೀಣ್‌. ಇದಕ್ಕೆ ಕಾರಣ, ಸಂಜಯ್‌ ತಮ್ಮ ಪತ್ನಿಯ ಜತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನುವ ಸಂಶಯದಿಂದ. ಈ ಬಗ್ಗೆ ಪ್ರವೀಣ್‌ ಬಾಯಿ ಬಿಟ್ಟಿದ್ದಾನೆ. ಆದ್ದರಿಂದ ಸಂಜಯ್‌ನನ್ನು ಕೊಲ್ಲಲು ತನ್ನ ಸಹಾಯಕ ಅಜಿತ್​​ ನೆರವು ಕೋರಿದ್ದಾನೆ.

ಇಬ್ಬರೂ ಪ್ಲ್ಯಾನ್‌ ಮಾಡಿ ಸಂಜಯ್‌ ಅವರನ್ನು ಪ್ರವೀಣ್​ ತಮ್ಮ ಮನೆಯ ಪಾರ್ಟಿಗೆ ಕರೆದಿದ್ದಾನೆ. ನಂತರ ಎಲ್ಲರೂ ಮದ್ಯಪಾನ ಮಾಡಿದ್ದಾರೆ. ಕಂಠಪೂರ್ತಿ ಕುಡಿದಿದ್ದ ಸಂಜಯ್‌ ಅವರ ಕತ್ತನ್ನು ಹಗ್ಗದಿಂದ ಹಿಸುಕಿದ್ದು ಅಜಿತ್​ ನಂತರ ಕಾರಿನಲ್ಲಿ ಹೆದ್ದಾರಿಗೆ ಕರೆತಂದಿದ್ದಾನೆ. ದೂರದಲ್ಲಿ ಟ್ರಕ್‌ ನಿಂತಿತ್ತು. ಇದನ್ನು ನೋಡಿದ ಆತ, ತಾನು ಕಾರಿನಿಂದ ಇಳಿದು, ಜೋರಾಗಿ ಎಕ್ಸ್​​ಲೇಟರ್​ ಕೊಟ್ಟು, ಟ್ರಕ್​ಗೆ ಗುದ್ದಿಸಿದ್ದಾನೆ. ಕಾರು ನುಜ್ಜುಗುಜ್ಜಾಗಿದೆ. ಆದ್ದರಿಂದ ಇದೊಂದು ಅಪಘಾತ ಎಂದೇ ಅಂದುಕೊಳ್ಳಲಾಗಿತ್ತು. ಇದೀಗ ಆರೋಪಿಗಳ ವಿರುದ್ಧ ಕೇಸ್ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net