

ಬೆಂಗಳೂರು: ನಿನ್ನೆ ಸೋಮವಾರವಷ್ಟೇ ನಗರದ ಲಕ್ಕಸಂದ್ರದ ಬಳಿ ಇರುವ ಮೂರಂತಸ್ತಿನ ಕಟ್ಟಡ ಕುಸಿದು ಬಿದ್ದಿತ್ತು. ಈ ಮನೆಯಲ್ಲಿ 40ಕ್ಕೂ ಹೆಚ್ಚು ಮೆಟ್ರೋ ಮಾರ್ಗ ನಿರ್ಮಾಣ ಕಾರ್ಮಿಕರು ವಾಸವಿದ್ದರು. ಅದೃಷ್ಟವಶಾತ್ ಮನೆಯಲ್ಲಿ ಇದ್ದವರೆಲ್ಲ ಹೊರಗೆ ಓಡಿ ಬಂದು ಬಚಾವ್ ಆಗಿದ್ದರು.
ಈ ಘಟನೆಯ ಬೆನ್ನಲ್ಲೇ ಇಂದು ಡೈರಿ ವೃತ್ತದ ಬಳಿಯಿರುವ ಕೆಎಂಎಫ್ ಕ್ವಾಟ್ರಸ್ ಕಟ್ಟಡ ಕುಸಿತವಾಗಿದೆ. ಮನೆ ಕುಸಿತವಾದ ವೇಳೆ ಮನೆಯೊಳಗೇ ಯಾವುದೇ ಜನರು ಇರಲಿಲ್ಲವಾದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ಪರಿಶೀಲನೆ ಮಾಡುತ್ತಿದ್ದಾರೆ.
ಕುಸಿತವಾದ ಕಟ್ಟಡ ಪಕ್ಕದಲ್ಲಿಯೇ ವಾಸ:
ಕೆಎಂಎಫ್ ಕ್ವಾಟ್ರಸ್ ನಲ್ಲಿ ಕುಸಿತವಾಗಿರುವ ಕಟ್ಟಡದಲ್ಲಿನ ಅಕ್ಕ- ಪಕ್ಕದ ಮನೆಯಲ್ಲಿ ಇನ್ನೂ ಜನರು ವಾಸವಿದ್ದಾರೆ. ಅವರ ಮನೆಯ ಗೋಡೆಗಳು ಕೂಡ ಬಿರುಕು ಬಿಟ್ಟಿವೆ. ಹೀಗಾಗಿ, ಪ್ರಾಣದ ಭಯದಲ್ಲಿಯೇ ವಾಸ ಮಾಡುತ್ತಿದ್ದಾರೆ. ಇನ್ನು ಕೆಲವರು ಮನೆಯಿಂದ ಹೊರಗೆ ಬಂದು ಬಟ್ಟೆ ಬರೆ, ಮತ್ತು ಅಡುಗೆ ಸಾಮಗ್ರಿಗಳನ್ನು ಹೊರಗಿಟ್ಟುಕೊಂಡು ಜೀವನ ಮಾಡುತ್ತಿದ್ದಾರೆ. ಹಲವು ಬಾರಿ ಬೇರೆಡೆ ಕ್ವಾಟ್ರಸ್ ನಿರ್ಮಿಸಿ ಕೊಡುವಂತೆ ಹಾಗೂ ದುರಸ್ತಿ ಮಾಡಿಕೊಡುವಂತೆ ಮನವಿ ಮಾಡಿದರೂ ಅಧಿಕಾರಿಗಳು ಗಮನ ಹರಿಸಿಲ್ಲ.
178 ಅಪಾಯಕಾರಿ ಕಟ್ಟಡ ಪತ್ತೆ:
ಪ್ರತಿವರ್ಷ ಮಳೆಗಾಲದಲ್ಲಿ ಶಿಥಿಲಾವಸ್ಥೆಯ ಹಾಗೂ ಕಳಪೆ ಗುಣಮಟ್ಟದ ಕಟ್ಟಡ ಕುಸಿದು ಅಪಾರ ಸಾವು-ನೋವು ಸಂಭವಿಸುತ್ತಿವೆ. ಹೀಗಾಗಿ, 2019ರ ನವೆಂಬರ್‌ನಲ್ಲಿ ಬಿಬಿಎಂಪಿ ನಡೆಸಿದ ಸಮೀಕ್ಷೆಯಲ್ಲಿ 178 ಅಪಾಯಕಾರಿ ಕಡ್ಡಗಳನ್ನು ಗುರುತಿಸಲಾಗಿತ್ತು. ಈ ಪೈಕಿ 78 ಕಟ್ಟಡಗಳ ಮಾಲೀಕರಿಗೆ ದುರಸ್ತಿ ಅಥವಾ ತೆರವು ಮಾಡುವಂತೆ ನೋಟಿಸ್ ನೀಡಲಾಗಿತ್ತು. ಇದೀಗ ಎರಡು ವರ್ಷದ ಮಳೆಗಾಲ ಆರಂಭವಾಗಿದ್ರೂ ಕಟ್ಟಡ ತೆರವು ಬಗ್ಗೆ ನಿರ್ಲಕ್ಷ್ಯವಹಿಸಿದೆ. ಪಾಲಿಕೆಯಿಂದ ನಿರ್ಮಿಸಲಾದ ಹಲವು ಕಟ್ಟಡಗಳು, ಶಾಲೆಗಳು ಶಿಥಿಲಾವಸ್ಥೆ ತಲುಪಿದ್ದು, ಅವುಗಳನ್ನು ತೆರವು ಮಾಡುವುದು ಅಗತ್ಯವಾಗಿದೆ.
ಕಟ್ಟಡ ಕುಸಿತದ ವಿಡಿಯೋ: