ಕರೊನಾದ ನಡುವೆಯೇ ಮೆದುಳು ತಿನ್ನುವ ಭೀಕರ ಅಮೀಬಾ ಪತ್ತೆ- ಇಬ್ಬರು ಮಕ್ಕಳ ಸಾವು

ameoba1
Published on

ವಾಷಿಂಗ್ಟನ್​: ಕರೊನಾ ಭೀತಿಯ ನಡುವೆ ಇದೀಗ ಅಮೆರಿಕನ್ನರಿಗೆ ಇನ್ನೊಂದು ಆಘಾತ ಎದುರಾಗಿದೆ. ನೀರಿನ ಮೂಲಕ ಮನುಷ್ಯನ ದೇಹವನ್ನು ಪ್ರವೇಶಿಸುವ ಅಮೀಬಾದಿಂದ (ಏಕಕೋಶ ಜೀವಿ) ಒಂದೇ ವಾರದಲ್ಲಿ ಸಾವು ಸಂಭವಿಸುತ್ತಿರುವುದು ಪತ್ತೆಯಾಗಿದೆ.

ಕಳೆದ ವರ್ಷದ ಸೆಪ್ಟೆಂಬರ್​ ತಿಂಗಳಿನಲ್ಲಿ ಹತ್ತು ವರ್ಷದ ಬಾಲಕಿ ಲಿಲ್ಲಿಮೇಯಿ ಅವಂತ್‌ ಬಲಿಯಾಗಿದ್ದಳು (ಚಿತ್ರದಲ್ಲಿರುವ ಬಾಲಕಿ). ಈಕೆ ಟೆಕ್ಸಾಸ್‌ ನದಿಯಲ್ಲಿ ಈಜುವಾಗ 'ನಯೆಗ್ಲೇರಿಯಾ ಫೊವ್ಲೇರಿ' ಹೆಸರಿನ ಈ ಏಕಕೋಶ ಜೀವಿ ಮೂಗಿನ ಮೂಲಕ ಆಕೆಯ ದೇಹ ಪ್ರವೇಶಿಸಿ, ಮೆದುಳಿನ ಕೋಶಗಳನ್ನು ತಿಂದುಹಾಕಿತ್ತು.

ಇದೀಗ ಮತ್ತೆ ಇದು ಕಾಣಿಸಿಕೊಂಡು ಆತಂಕ ಮೂಡಿಸಿದೆ. ಕಳೆದ ತಿಂಗಳು ಲೇಕ್ ಜಾಕ್ಸನ್ ನಗರದಲ್ಲಿ ಬಾಲಕ ಜೋಶಿಯಾ ಮ್ಯಾಕ್‌ಇಂಟೈರ್ (ಚಿತ್ರದಲ್ಲಿರುವ ಬಾಲಕ) ಅನುಮಾನಾಸ್ಪದ ಸೋಂಕಿನಿಂದ ಮೃತಪಟ್ಟಿದ್ದ. ಅವನನ್ನು ಪರೀಕ್ಷಿಸಿದಾಗ ನಾಗ್ಲೆರೀಯಾ ಫೌಲೇರಿ ಅಥವಾ ಮೆದುಳು ತಿನ್ನುವ ಸೂಕ್ಷ್ಮಾಣು ಜೀವಿಯಿಂದ ಈತ ಮೃತನಾದದ್ದು ತಿಳಿದು ವೈದ್ಯರು ಅಚ್ಚರಿ ಪಟ್ಟಿದ್ದರು.

ಆದರೆ ಈ ಭಯಾನಕ ಮೈಕ್ರೋಬ್ ಬಾಲಕನ ಮೆದುಳು ಸೇರಿದ್ದಾದರೂ ಎಲ್ಲಿಂದ ಎಂಬುದು ಮಾತ್ರ ಬಿಡಿಸಲಾರದ ಪ್ರಶ್ನೆಯಾಗಿ ಉಳಿದಿತ್ತು. ನಂತರ ತನಿಖೆಯಲ್ಲಿ ಈ ಸೂಕ್ಷ್ಮಾಣು ಜೀವಿಗಳು ಟೆಕ್ಸಾಸ್ ರಾಜ್ಯದ ಲೇಕ್ ಜಾನ್ಸನ್ ನಗರದಲ್ಲಿ ಇನ್ನೂ ಬದುಕಿವೆ ಎಂಬುದು ಗೊತ್ತಾಗಿದೆ.

ಕಳೆದ ವರ್ಷ ಇದೇ ವೇಳೆ ಲಿಲ್ಲಿಮೇಯಿ ಅವಂತ್‌ ಬಲಿಯಾಗುವುದು ವೈದ್ಯರ ಗಮನಕ್ಕೆ ಬಂತು. ಈ ಬಾಲಕಿಗೆ ಯಾವುದೇ ರೋಗ ಲಕ್ಷಣಗಳು ಕಾಣಿಸಿರಲಿಲ್ಲ. ಆ ಬಳಿಕ ತೀವ್ರ ತಲೆನೋವು ಮತ್ತು ಜ್ವರ ಆರಂಭವಾಯಿತು. ವೈದ್ಯರು ಇದು ಸಾಮಾನ್ಯ ಜ್ವರವಿರಬಹುದೆಂದು ಚಿಕಿತ್ಸೆ ನೀಡಿದರೂ ಆಕೆಯ ಪರಿಸ್ಥಿತಿ ದಿನದಿಂದ ದಿನಕ್ಕೆ ವಿಷಮಿಸತೊಡಗಿ ವಾರದಲ್ಲಿಯೇ ಮೃತಪಟ್ಟಿದ್ದಳು.

ಮೆದುಳು ಸೇರಿದರೆ ಒಂದೇ ವಾರದಲ್ಲಿ ಸಾವು ಬರುವುದು ಗ್ಯಾರಂಟಿ. ವಿಚಿತ್ರ ಎಂದರೆ ಈ ಸೋಂಕಿಗೆ ಸರಿಯಾದ ಔಷಧಗಳೇ ಲಭ್ಯವಿಲ್ಲವಂತೆ.

ಜ್ವರ, ವಾಂತಿ, ತಲೆನೋವು ಕಾಡುವುದು ಮೆದುಳು ತಿನ್ನುವ ಅಮೀಬಾ ದೇಹ ಪ್ರವೇಶಿಸಿರುವ ಲಕ್ಷಣವಾಗಿದೆ. ಈ ಜೀವಿ ದೇಹ ಪ್ರವೇಶಿಸಿದ ಕೂಡಲೇ ತನ್ನ ಕೆಲಸ ಆರಂಭಿಸಲು ಶುರು ಮಾಡುತ್ತದೆ. ಒಂದೆರಡು ದಿನಗಳಲ್ಲಿ ತೀವ್ರ ಜ್ವರ ಹಾಗೂ ತಲೆನೋವು ಕಾಡಲು ಆರಂಭವಾಗುತ್ತದೆ. ನಂತರ ಭಾರಿ ಪ್ರಮಾಣದಲ್ಲಿ ವಾಂತಿಯಾಗುವಂತೆ ಮಾಡುತ್ತದೆ. ರೋಗನಿರೋಧಕ ಶಕ್ತಿಯು ದಿನದಿಂದ ದಿನಕ್ಕೆ ಕುಸಿಯುತ್ತಾ ವಾರದಲ್ಲಿಯೇ ವ್ಯಕ್ತಿ ಸಾಯುತ್ತಾನೆ ಎಂದಿದ್ದಾರೆ ವೈದ್ಯರು.

ಇದು ಒಬ್ಬ ಮನುಷ್ಯನಿಂದ ಮತ್ತೊಬ್ಬನಿಗೆ ಅಂಟಿಕೊಳ್ಳುವ ಸೋಂಕು ಅಲ್ಲ. ಆದರೆ ನೀರಿನ ಮೂಲಕ ತುಂಬಾ ವೇಗವಾಗಿ ಇಡೀ ಮನುಕುಲದ ಮೆದುಳಿನ ಮೇಲೆ ದಾಳಿ ಮಾಡಿ, ಜೀವ ತೆಗೆಯುತ್ತದೆ. ಹೀಗಾಗಿ ನೀರು ಬಳಸುವ ಮುನ್ನ ಚೆನ್ನಾಗಿ ಕುದಿಸುವಂತೆ ಅಮೆರಿಕದ ಅಧಿಕಾರಿಗಳು ಅಲ್ಲಿನ ನಾಗರಿಕರಿಗೆ ಎಚ್ಚರಿಕೆ ಜತೆ ಸಲಹೆಯನ್ನೂ ನೀಡಿದ್ದಾರೆ.

ಇದು ಸದ್ಯ  ಒಂದೆರಡು ಕಡೆ ಕಂಡುಬಂದಿದ್ದರೂ, ಇನ್ನೂ ಅನೇಕ ಕಡೆಗಳಲ್ಲಿ ಪತ್ತೆಯಾಗುವ ಸಾಧ್ಯತೆ ಇರುವ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ಕುದಿಸಿರುವ ನೀರನ್ನು ಕುಡಿಯುವಂತೆ ಟೆಕ್ಸಾಸ್​ ಪರಿಸರ ಆಯೋಗ ಎಚ್ಚರಿಕೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net