

ನವದೆಹಲಿ: ಕಾಂಗ್ರೆಸ್ ಸಚಿವನ ಪುತ್ರನೊಬ್ಬ ಇದೀಗ ರೇಪ್ ಕೇಸ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಯುವತಿಯೊಬ್ಬರಿಗೆ ಮತ್ತು ಬರಿಸುವ ಪಾನೀಯ ಕೊಟ್ಟು ಅತ್ಯಾಚಾರ ಎಸಗಿರುವ ಆರೋಪ ರಾಜಸ್ಥಾನದ ಕಾಂಗ್ರೆಸ್ ಸಚಿವ ಮಹೇಶ್ ಜೋಶಿ ಪುತ್ರ ರೋಹಿತ್ ಜೋಶಿ ಮೇಲಿದೆ.
ಕಳೆದ ವರ್ಷದ ಜೈಪುರ ಮತ್ತು ದೆಹಲಿಯಲ್ಲಿ ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ 23 ವರ್ಷದ ಯುವತಿ ನೀಡಿರುವ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ಅತ್ಯಾಚಾರ, ಮತ್ತು ಬರಿಸುವ ಪದಾರ್ಥ ನೀಡಿರುವುದು, ಗರ್ಭಪಾತ, ಮದುವೆಯಾಗಲು ಬಲವಂತ-ಅಪಹರಣ, ಲೈಂಗಿಕ ದೌರ್ಜನ್ಯ ಇತ್ಯಾದಿ ಸೆಕ್ಷನ್‌ಗಳ ಅಡಿಯಲ್ಲಿ ಕೇಸನ್ನು ದಾಖಲು ಮಾಡಲಾಗಿದೆ.
ಯುವತಿಯ ದೂರೇನು?
ಯುವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಇರುವುದು ಏನೆಂದರೆ: ಮಹೇಶ್ ಜೋಶಿ ಪುತ್ರ ರೋಹಿತ್ ಜೋಶಿ ನನಗೆ ಫೇಸ್‌ಬುಕ್‌ನಲ್ಲಿ ಪರಿಚಯ ಆಗಿದ್ದರು. ನಂತರ ಇಬ್ಬರೂ ಭೇಟಿಯಾಗಲು ನಿರ್ಧರಿಸಿದೆವು. ನಂತರ 2021ರ ಆರಂಭದಲ್ಲಿ ಆತ ನನ್ನನ್ನು ಜೈಪುರದ ಸವಾಯಿ ಮಾಧವ್ ಪುರಕ್ಕೆ ಬರುವಂತೆ ಹೇಳಿದ್ದ. ಅಲ್ಲಿಯ ಹೋಟೆಲ್ ಒಂದಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ನಮ್ಮಿಬ್ಬರನ್ನು ಗಂಡ-ಹೆಂಡತಿ ಎಂದು ನಮೂದು ಮಾಡಿದ್ದ ಆ ಸಂದರ್ಭದಲ್ಲಿ ನನಗೆ ಗೊತ್ತಿಲ್ಲದೇ ಮತ್ತು ಬರುವ ಪಾನೀಯ ಸೇವಿಸಲು ಕೊಟ್ಟಿದ್ದಾರೆ. ನನಗೆ ಎಚ್ಚರವಾದಾಗ ನಗ್ನವಾಗಿದ್ದೆ. ಇದನ್ನು ವಿಡಿಯೋ ಮಾಡಿಕೊಂಡಿದ್ದ ಆತ ಯಾರಿಗಾದರೂ ವಿಷಯ ಹೇಳಿದರೆ ಈ ವಿಡಿಯೋ ಲೀಕ್ ಮಾಡುವುದಾಗಿ ಹೇಳಿದ್ದ.
ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ನಾನು ಗರ್ಭ ಧರಿಸಿದೆ. ಗರ್ಭಪಾತ ಮಾಡುವಂತೆ ಹೇಳಿದ. ಮಾತ್ರೆ ಕೊಟ್ಟಿದ್ದ. ಆದರೆ ಅದನ್ಉ ನಾನು ಸೇವಿಸಿರಲಿಲ್ಲ. ಇಷ್ಟೇ ಅಲ್ಲದೇ, ಈತ ನನ್ನ ಮೇಲೆ ದೆಹಲಿ ಮತ್ತು ಜೈಪುರದಲ್ಲಿ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ. ನಂತರ ಮದುವೆಯಾಗದೇ ಕೈಕೊಟ್ಟಿದ್ದಾನೆ ಎಂದು ಯುವತಿ ಹೇಳಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.