

ಭೋಪಾಲ್: ಪ್ರೀತಿ, ಪ್ರೇಮ ಕುರುಡು, ಕಣ್ಣಿಲ್ಲ ಎನ್ನುತ್ತಾರೆ. ಹಾಗೆಂದು ಬೇರೆಯವರ ಪ್ರಾಣವನ್ನು ಪಣಕ್ಕಿಟ್ಟು ಪ್ರೀತಿ ಮಾಡಿದರೆ ಹೇಗೆ? ಇಂಥದ್ದೊಂದು ಘಟನೆ ಭೋಪಾಲ್‌ನಲ್ಲಿ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಅದೇನೆಂದರೆ ಯುವಕ ಬೈಕ್ ಚಲಿಸುತ್ತಿದ್ದು, ಅವನನ್ನು ಯುವತಿಯೊಬ್ಬಳು ತಬ್ಬಿಕೊಂಡಿದ್ದಾಳೆ.ಆತನ ಎದುರು ಮುಖ ಮಾಡಿ ಕುಳಿತಿರುವ ಯುವತಿ ಅವನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಆಕೆ ಕುಳಿತಿದ್ದಾಳೆ. ಯುವಕ ಬೈಕ್ ಚಲಿಸುತ್ತಲೇ ಇದ್ದಾನೆ. ಇದನ್ನು ಹಿಂದಿನಿಂದ ಕಾರಿನಲ್ಲಿ ಬರುತ್ತಿರುವವರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಹೀಗೆ ಇವರೇನೋ ಪ್ರೇಮದ ಅಮಲಿನಲ್ಲಿ ತೇಲಾಡುತ್ತಿದ್ದಾರೆ. ಆದರೆ ಉಳಿದ ವಾಹನ ಸವಾರರಿಗೆ ಇದು ಫಜೀತಿ ತಂದೊಡ್ಡಿದೆ. ಇವರನ್ನು ನೋಡುತ್ತಾ ವಾಹನ ಚಲಾಯಿಸುವವರು ಒಂದೆಡೆಯಾದರೆ, ಈ ಪುಣ್ಯಾತ್ಮ ಸವಾರ ಪ್ರೀತಿ ಹೆಚ್ಚಾಗಿ ಎರ್ರಾಬಿರ್ರಿ ಗಾಡಿ ಓಡಿಸಿ ಬೇರೆಯವರ ಪ್ರಾಣಕ್ಕೆ ಕುತ್ತಿ ತಂದರೆ ಏನು ಗತಿ ಎನ್ನುವುದು ಇನ್ನು ಕೆಲವರ ಭಯ.
ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿರುವ ಭೋಪಾಲ್ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಜೋಡಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಬಗ್ಗೆ ಯಾರೂ ಕೂಡ ದೂರು ನೀಡಿರಲಿಲ್ಲ, ಆದರೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಭೋಪಾಲ್‌ನ ಉತ್ತರ ವಿಭಾಗದ ಎಸ್.ಪಿ ವಿಜಯ್ ಕುಮಾರ್ ಖತ್ರಿ ಹೇಳಿದ್ದಾರೆ.
ಸಿಸಿಟಿವಿ, ವಿಡಿಯೋಗಳ ಆಧಾರದ ಮೇಲೆ ಬೈಕ್ ಸಂಖ್ಯೆಯನ್ನು ಪತ್ತೆ ಹಚ್ಚಿ ಇವರನ್ನು ಶೀಘ್ರ ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ.
ನೀವೂ ನೋಡಿ ಈ ವಿಡಿಯೋ