

ಬೆಂಗಳೂರು: ನಮ್ಮ ಬೆಂಗಳೂರಲ್ಲಿ ರಸ್ತೆಗಳು ಸರಿಯಿಲ್ಲ. ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಗುಂಡಿಗಳಿಂದ ಸುಮಾರು ಜನ ಸತ್ತೋಗ್ತಾ ಇದ್ದಾರೆ. ಆದ್ದರಿಂದ ರಸ್ತೆ ಗುಂಡಿಗಳನ್ನು ಸರಿಪಡಿಸಿ ಸಿಎಂ ತಾತಾ. ನನ್ನ ಪಾಕೆಟ್ ಮನಿಯನ್ನೂ ಬೇಕಿದ್ರೆ ಕೊಡುವೆ...’
ಹೀಗೆಂದು ಬೆಂಗಳೂರಿನ ಬಾಲಕಿಯೊಬ್ಬಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾಳೆ. ಎರಡನೇ ತರಗತಿ ಓದುತ್ತಿರುವ ಎಲ್.ಧವನಿ ಎಂಬ ಬಾಲಕಿ 1.13 ನಿಮಿಷಗಳ ವಿಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ರಸ್ತೆ ಗುಂಡಿ ಸರಿಮಾಡಬೇಕಿದೆ ಸಿಎಂ ತಾತಾ.. ಜನ ಸತ್ತು ಹೋದ್ರೆ ಅವರ ಕುಟುಂಬದವರು ಹೇಗೆ ಜೀವನ ಮಾಡ್ತಾರೆ ಅಲ್ವಾ? ಹೊರಗಡೆ ಹೋಗಿರುವ ನಮ್ಮ ಅಪ್ಪ ಎಷ್ಟೊತ್ತಿಗೆ ಬರ್ತಾರೋ ಅಂತಾ ನಾನೂ ಯಾವಾಗ್ಲೂ ಕಾಯ್ತಾ ಇರ್ತೇನೆ. ಹೀಗೆ ಆಗಿದೆ ಪರಿಸ್ಥಿತಿ. ಆದ್ದರಿಂದ ಆ ಗುಂಡಿಗಳನ್ನ ಬೇಗ ಮುಚ್ಚಿಸಿ, ಜನರ ಜೀವ ಉಳಿಸಿ. ನಂಗೆ ಚಾಕೋಲೇಟ್ ತಗೋ ಅಂತಾ ನಮ್ಮ ಅಪ್ಪ-ಅಮ್ಮ ಪಾಕೆಟ್ ಮನಿ ಕೊಡ್ತಾರೆ. ಅದನ್ನೂ ಬೇಕಿದ್ರೆ ಕೊಡ್ತೇನೆ. ಅದರಿಂದ ಆ ಗುಂಡಿಗಳನ್ನು ಮುಚ್ಚಿಸಿ ಎಂದು ಬಾಲಕಿ ವಿಡಿಯೋದಲ್ಲಿ ಹೇಳಿದ್ದಾಳೆ.
ಗುಂಡಿಗಳಿಂದಾಗಿ ಅನೇಕ ಬಾರಿ ನಾನೂ ಬೈಕ್ನಿಂದ ಬಿದ್ದಿದ್ದೇನೆ ಎಂದಿರುವ ಧವನಿ, ಅನೇಕ ಮಂದಿ ಗುಂಡಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿರುವ ಸುದ್ದಿ ಕೇಳಿ ವಿಡಿಯೋ ಮಾಡಿರುವುದಾಗಿ ಹೇಳಿದ್ದಾಳೆ. ಒಂದು ವೇಳೆ ಸರ್ಕಾರ ಇದಕ್ಕೆ ಸ್ಪಂದಿಸದಿದ್ದರೆ ತಾನೇ ಖುದ್ದಾಗಿ ಒಂದೊಂದೇ ಗುಂಡಿಗಳನ್ನು ಮುಚ್ಚುತ್ತಾ ಬರುವುದಾಗಿ ಈಕೆ ಹೇಳಿದ್ದಾಳೆ.
ಸದ್ಯ ಬಾಲಕಿಯ ವಿಡಿಯೋ ಸಾಕಷ್ಟು ಜನಪ್ರಿಯತೆ ಗಳಿಸಿದ್ದು, ಬೊಮ್ಮಾಯಿಯವರ ಪ್ರತಿಕ್ರಿಯೆಗಾಗಿ ಜನರು ಕಾದಿದ್ದಾರೆ.
ಬಾಲಕಿಯ ವಿಡಿಯೋ ಇಲ್ಲಿದೆ ನೋಡಿ: