ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸೋ ಬಿದಿರಿನ ಕುಕೀಸ್- ಯುವಕರಿಗೆ ಉದ್ಯೋಗದ ಮಹಾಪೂರ

bamboo
Published on

ಅಗರ್ತಲಾ: ಕರೊನಾ ವೈರಸ್​ ಹಾವಳಿ ಶುರುವಾದಾಗಿನಿಂದಲೂ ಎಲ್ಲರ ಬಾಯಲ್ಲೂ ಒಂದೇ ಮಾತು, ಇಮ್ಯುನಿಟಿ (ರೋಗ ನಿರೋಧಕ ಶಕ್ತಿ) ಹೆಚ್ಚು ಮಾಡಿಕೊಂಡರೆ ಕರೊನಾ ಹಾವಳಿಯಿಂದ ಮುಕ್ತವಾಗಬಹುದು ಎಂದು.

ಇದೇ ಕಾರಣಕ್ಕೆ ಇದೀಗ ನಮ್ಮ ಹಿರಿಯ ತಲೆಮಾರಿನ ಜನರೇ ಉಪಯೋಗಿಸುತ್ತಿರುವ, ಈಗಿನ ಹೆಚ್ಚು ಮಂದಿಯಿಂದ ತಾತ್ಸಾರಕ್ಕೆ ಒಳಗಾಗಿರುವ ವೈದ್ಯಕೀಯ ಗುಣಗುಳುಳ್ಳ ಪದಾರ್ಥಗಳು ಮತ್ತೆ ಮುನ್ನೆಲೆಗೆ ಬರುತ್ತಿವೆ.

ಅಂಥದರಲ್ಲಿಯೇ ಒಂದು ಬಿದಿರು. ಒಂದೆಡೆ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ, ಸ್ವದೇಶಿ ಉತ್ಪನ್ನಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ವೋಕಲ್ ಫಾರ್ ಲೋಕಲ್ ಎಂದು ನೀಡಿದ ಕರೆ, ಅದೇ ಇನ್ನೊಂದೆಡೆ ಕರೊನಾ ಮಾರಿಯಿಂದ ಮುಕ್ತಿಗಾಗಿ ಜನರ ಮೊರೆ... ಇವೆರಡರ ಸಮ್ಮಿಳನವೇ ಬಿದಿರಿನ ಕುಕೀಸ್​.

ಹಿಂದೆಲ್ಲಾ ಭೀಕರ ಬರಗಾಲದ ಸಮಯದಲ್ಲಿ ಬಿದಿರಿನ ಅಕ್ಕಿಯೇ ಬಳಕೆಯಾಗುತ್ತಿತ್ತು. ಆಗಿನವರಿಗೆ ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಎನ್ನುವುದು ತಿಳಿದಿತ್ತು. ಇದೀಗ ಮತ್ತೆ ಬಿದಿರು ಪ್ರಚಾರಕ್ಕೆ ಬಂದಿದೆ. ಅಗರ್ತಲಾ ರಾಜ್ಯ ಸರ್ಕಾರ ಈಗ ಬಿದಿರಿನ ಕುಕೀಸ್ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಇದರ ಪಾತ್ರ ಬಹುಮುಖ್ಯವಾಗಿದೆ ಎನ್ನುವುದು ಸರ್ಕಾರದ ಮಾತು.

ತ್ರಿಪುರಾ ಉತ್ತಮ ಗುಣಮಟ್ಟದ ಬಿದಿರು ಬೆಳೆಯುವ ಒಂದು ರಾಜ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕುಕೀಸ್​ ತಯಾರಿ ಮಾಡಲಾಗಿದ್ದು, ಇದನ್ನು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್ ದೇಬ್ ಬಿಡುಗಡೆ ಮಾಡಿದ್ದಾರೆ. ಕಳೆದ ಶುಕ್ರವಾರ ಅಂತಾರಾಷ್ಟ್ರೀಯ ಬಿದಿರು ದಿನವಾಗಿತ್ತು. ಈ ದಿನದಂದು ಕುಕೀಸ್​ ಬಿಡುಗಡೆಯಾಗಿದೆ. ಮಾತ್ರವಲ್ಲದೇ ಬಿದಿರಿನಿಂದ ತಯಾರಿಸಿದ ಜೇನು ಸಂಗ್ರಹಿಸುವ ಬಾಟಲಿಯನ್ನೂ ಈ ದಿನ ಬಿಡುಗಡೆ ಮಾಡಲಾಗಿದೆ.

ಸ್ಥಳೀಯವಾಗಿ ಮೂಲಿ ಎಂದು ಕರೆಯುವ ಬಿದಿರಿನಿಂದ ಬ್ಯಾಂಬೂ ಅಂಡ್ ಕೇನ್ ಡೆವಲಪ್ ಮೆಂಟ್ ಇನ್ಸ್ಟಿಟ್ಯೂಟ್ ಕುಕೀಸ್ ಅಭಿವೃದ್ಧಿ ಮಾಡಿದೆ. ಕಾರ್ಬೋಹೈಡ್ರೇಟ್, ಪ್ರೊಟೀನ್, ಮಿನರಲ್, ವಿಟಮಿನ್, ಫೈಬರ್ ಹಾಗೂ ಲೋ ಕ್ಲಾಸ್ ಶುಗರ್ ಮುಂತಾದ ಪೋಷಕಾಂಶಗಳನ್ನು ಬಿದಿರಿನ ಕುಕೀಸ್ ಹೊಂದಿದೆ.

ಅದೇ ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತಕ್ಕೆ ಇದು ನಾಂದಿ ಹಾಡಿದೆ. ಈ ಕುಕೀಸ್​ ಹಾಗೂ ಬಾಟಲಿ ತಯಾರಿಕೆಯಿ.ದ ಸಹಸ್ರಾರು ತ್ರಿಪುರಾದ ಜನರಿಗೆ ಸ್ವ ಉದ್ಯೋಗವನ್ನು ಇದು ಕಲ್ಪಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net