ನಟ ಸಿದ್ಧಾಂತ್​​ಗೆ ಬೇಲ್​- ಡ್ರಗ್ಸ್​ ಕೇಸ್​ನಲ್ಲಿ ಹಿಂದೆಯೂ ಸಿಲುಕಿದ್ದ ಅಣ್ಣ-ತಂಗಿ: ಅಪ್ಪ ಶಕ್ತಿ ಕಪೂರ್​ ಹೇಳಿದ್ದೇನು?

siddhanthkapoor
Published on

ಬೆಂಗಳೂರು: ಇದೇ ಭಾನುವಾರ (ಡಿ.12) ತಡರಾತ್ರಿಯಾದರೂ ಪಾರ್ಟಿ ನಡೆಸುತ್ತಿದ್ದ ಬೆಂಗಳೂರಿನ ಪಂಚತಾರಾ ಹೋಟೆಲ್ ಹಲಸೂರು ಪೊಲೀಸರು ದಾಳಿ ನಡೆಸಿದ್ದರು. ಅದರಲ್ಲಿ ಬಾಲಿವುಡ್​ನ ಖ್ಯಾತ ನಟ ಶಕ್ತಿ ಕಪೂರ್​ ಅವರ ಮಗ ಸಿದ್ಧಾಂತ್​ ಕಪೂರ್​ ಸೇರಿದಂತೆ ಹಲವರನ್ನು ಡ್ರಗ್ಸ್​ ಕೇಸ್​ನಲ್ಲಿ ಬಂಧಿಸಲಾಗಿತ್ತು. ಡಾನ್ಸ್​ ಜಾಕಿ (ಡಿಜೆ) ಆಗಿರುವ ಸಿದ್ಧಾಂತ್​ ಕಪೂರ್​ ಡ್ರಗ್ಸ್​ ಸೇವನೆ ಮಾಡಿದ್ದರು ಎಂದು ಪರೀಕ್ಷೆಯಿಂದ ತಿಳಿದುಬಂದಿದೆ ಎನ್ನಲಾಗಿದೆ.

ಹಲಸೂರು ಬಳಿಯ ಜಿ.ಟಿ ಮಾಲ್ ಬಳಿಯ ಪಾರ್ಕ್ ಹೋಟೆಲ್​ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ರಾತ್ರಿ 12 ಗಂಟೆಗೆ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದರು. 50ಕ್ಕೂ ಹೆಚ್ಚು ಯುವಕ ಮತ್ತು ಯುವತಿಯರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾಗ ಹಲವರು ಡ್ರಗ್ಸ್ ಸೇವನೆ ಮಾಡಿದ್ದು ಕಂಡುಬಂದಿತ್ತು.

ಬಂಧನಕ್ಕೆ ಒಳಗಾಗುತ್ತಿದ್ದಂತೆಯೇ ಸಿದ್ಧಾಂತ್​ ಕಪೂರ್​ ಜಾಮೀನು ಕೋರಿ ಕೋರ್ಟ್​ ಮೊರೆ ಹೋಗಿದ್ದರು. ಅವರಿಗೆ ಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಕೋರ್ಟ್​ಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ಧಾಂತ್​ ಅಪ್ಪ ಶಕ್ತಿ ಕಪೂರ್, ನನ್ನ ಮಗ ಡ್ರಗ್ಸ್​ ಸೇವಿಸಲು ಸಾಧ್ಯವೇ ಇಲ್ಲ. ಇವೆಲ್ಲಾ ಪಿತೂರಿ ಎಂದಿದ್ದಾರೆ. ಆತ ಡಾನ್ಸ್​ ಜಾಕಿಯಾಗಿರುವ ಕಾರಣ, ಹೀಗೆ ಪಾರ್ಟಿಗಳಿಗೆ ಹೋಗುವುದು ಮಾಮೂಲು, ಆದ್ರೆ ಡ್ರಗ್ಸ್​ ಸೇವನೆ ಮಾಡುವುದಿಲ್ಲ. ನಮ್ಮದು ಸಂಪ್ರದಾಯಸ್ಥ ಕುಟುಂಬ. ನನ್ನ ಮಗ ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಅರಿತು ಬೆಳೆದವನು ಎಂದಿದ್ದಾರೆ. ಈ ಹಿಂದೆ ಸಿದ್ದಾಂತ್ ಕಪೂರ್ ಸೋದರಿ, ನಟಿ ಶ್ರದ್ಧಾ ಕಪೂರ್ ಹೆಸರು ಸಹ ಡ್ರಗ್ಸ್ ಜಾಲದಲ್ಲಿ ಕೇಳಿ ಬಂದಿತ್ತು. ಅವರ ವಿಚಾರಣೆಯನ್ನೂ ಮಾಡಲಾಗಿತ್ತು.

ಅಷ್ಟಕ್ಕೂ ಸಿದ್ಧಾಂತ್​ ಕಪೂರ್​, ಹೀಗೆ ಡ್ರಗ್ಸ್​ ಕೇಸ್​ನಲ್ಲಿ ಸಿಲುಕಿದ್ದು ಇದೇ ಮೊದಲೇನಲ್ಲ. 2008ರಲ್ಲಿ ಮುಂಬೈನಲ್ಲಿ ನಡೆದ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದ ಪೊಲೀಸರು 240 ಮಂದಿಯನ್ನು ವಶಕ್ಕೆ ಪಡೆದಿದ್ದರು. ಆ 240 ಮಂದಿ ಪೈಕಿ ಸಿದ್ಧಾಂತ್ ಕಪೂರ್ ಕೂಡ ಒಬ್ಬರಾಗಿದ್ದರು. ಈ ಸಮಯದಲ್ಲಿ 8 ಮಂದಿ ಡ್ರಗ್ ಪೆಡ್ಲರ್‌ಗಳನ್ನೂ ಪೊಲೀಸರು ಬಂಧಿಸಿದ್ದರು. ಅಂದಿನ ಪಾರ್ಟಿಯಲ್ಲಿ ಸುಮಾರು ಒಂದು ದಶಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್‌ ಸೀಜ್​ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net