More

    ಅಪ್ಪು ಕನಸಿನ ‘ಗಂಧದ ಗುಡಿ’ ಕುರಿತು ಸಿಎಂ ಮಾಡಿರುವ ಟ್ವೀಟ್‌ಗೆ ಅಶ್ವಿನಿ ಪ್ರತಿಕ್ರಿಯೆ ಹೀಗಿದೆ…

    ಬೆಂಗಳೂರು: ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ಎಲ್ಲರನ್ನೂ ಅಗಲಿ ತಿಂಗಳೇ ಕಳೆದುಹೋಗಿದೆ. ಆದರೆ ಅವರ ಕನಸಿನ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ನಿನ್ನೆ (ಸೋಮವಾರ) ಬಿಡುಗಡೆಗೊಂಡಿದ್ದು, ಕುಟುಂಬಸ್ಥರನ್ನು ಹಾಗೂ ಅಭಿಮಾನಿಗಳನ್ನು ಕಣ್ಣೀರಿನಲ್ಲಿ ತೇಲಿಸಿದೆ.

    ಪುನೀತ್‌ ರಾಜ್‌ಕುಮಾರ್‌ ಅವರ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡವರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಒಬ್ಬರು. ಪುನೀತ್‌ ಅವರ ನಿಧನದ ಮೊದಲ ದಿನದಿಂದಲೂ ಅವರು ಮನೆಯ ಜನರಂತೆಯೇ ಪುನೀತ್‌ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡವರು.

    ಇದೀಗ ಅವರು ಕೂಡ ಗಂಧದ ಗುಡಿ ಸಾಕ್ಷ್ಯ ಚಿತ್ರದ ಟೀಸರ್‌ ವೀಕ್ಷಿಸಿ ಬಹಳ ಭಾವುಕರಾಗಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿದ ಅವರು, ‘ನಮ್ಮೆಲ್ಲರ ಪ್ರೀತಿಯ ಅಪ್ಪು ದಿ. ಪುನೀತ್ ರಾಜಕುಮಾರ್ ಅಭಿನಯದ ಪಿ.ಆರ್.ಕೆ ಪ್ರೊಡಕ್ಷನ್ ನಿರ್ಮಿಸಿರುವ ‘ಗಂಧದ ಗುಡಿ’ ಒಂದು ಅದ್ಭುತ ಕಲಾಕೃತಿ. ನಾಡಿನ ಪ್ರಾಕೃತಿಕ ಶ್ರೀಮಂತಿಕೆ, ಜೀವಸಂಕುಲ, ಬುಡಕಟ್ಟು ಜನರ ಸಂಸ್ಕೃತಿಗಳನ್ನು ಪರಿಚಯಿಸುವ ಮೂಲಕ, ವಿಶಿಷ್ಟ ರೀತಿಯಲ್ಲಿ ಕಥೆಯೊಂದನ್ನು ಹೇಳುತ್ತಿದೆ. ಈ ಅದ್ಭುತ ದೃಶ್ಯಕಾವ್ಯದ ಸಂದೇಶ ಎಲ್ಲರಿಗೂ ತಲುಪಬೇಕು. ಪ್ರತಿ ಭಾರತೀಯ, ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಕನ್ನಡಿಗ ಕರುನಾಡಿನ ಈ ಕಥಾನಕವನ್ನು ನೋಡುವಂತಾಗಲಿ. ನಮ್ಮ ಅರಣ್ಯ, ನಮ್ಮ ಪರಿಸರ, ವೈವಿಧ್ಯಮಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರ ಪ್ರೇರಣೆ ನೀಡಲಿ ಎಂದು ಹಾರೈಸುತ್ತೇನೆ’ ಎಂದಿದ್ದರು.

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪುನೀತ್‌ ಅವರ ಪತ್ನಿ ಅಶ್ವಿನಿ, ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ‘ಈ ‘ಗಂಧದ ಗುಡಿ’ಯನ್ನು ನಾಡಿನ ಪ್ರತಿಯೊಬ್ಬರಿಗೂ ತಲುಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದು. ಈ ನಿಟ್ಟಿನಲ್ಲಿ ನೀವು ನೀಡುತ್ತಿರುವ ಸಹಕಾರ ಮತ್ತು ಪ್ರೋತ್ಸಾಹಕ್ಕೆ ನಾವು ಸದಾ ಆಭಾರಿ’ ಎಂದು ಹೇಳಿದ್ದಾರೆ. ಈ ಮೂಲಕ ಪತಿಯ ಅಕಾಲಿಕ ನಿಧನದ ನಂತರವೂ ದೊಡ್ಮನೆ ಸೊಸೆ ತಮ್ಮ ಕರ್ತವ್ಯವನ್ನು ಮರೆಯದೇ ತಮಗೆ ಸಹಕರಿಸಿದವರಿಗೆ ಧನ್ಯವಾದ ಸಮರ್ಪಿಸುತ್ತಿರುವುದು ಭಾರಿ ಶ್ಲಾಘನೆಗೆ ವ್ಯಕ್ತವಾಗಿದೆ. ಈ ಹಿಂದೆ ಕೂಡ ಪುನೀತ್‌ ಅವರ ನಿಧನದ ಬಳಿಕ, ಸರ್ಕಾರ ಮತ್ತು ಪೊಲೀಸ್‌ ಇಲಾಖೆಗೆ ಧನ್ಯವಾದ ಸಲ್ಲಿಸಿ ನೋವಿನಲ್ಲಿಯೂ ಕರ್ತವ್ಯ ಮೆರೆದಿದ್ದರು.

    ಮಲೆನಾಡಿನ ಕಾಡು, ಮೇಡು, ನಿಸರ್ಗ ಸೌಂದರ್ಯವನ್ನು ಹೊಂದಿರುವ ಗಂಧದ ಗುಡಿಯ ಕೊನೆಯಲ್ಲಿ ಡಾ. ರಾಜ್‍ಕುಮಾರ್ ಧ್ವನಿಯಲ್ಲಿ ಅರಣ್ಯವನ್ನು ಉಳಿಸು, ಪ್ರಾಣಿಗಳನ್ನು ಉಳಿಸು ಎಂಬ ಸಂದೇಶ ಸಾರಲಾಗಿದೆ. ಅಮೋಘವರ್ಷ ನಿರ್ದೇಶನದ ಈ ಡಾಕ್ಯುಮೆಂಟರಿ ಸಿನಿಮಾ ಮುಂದಿನ ವರ್ಷ 2022ರಲ್ಲಿ ತೆರೆಕಾಣಲಿದೆ.

    VIDEO: ಅಪ್ಪು ಕನಸಿನ ‘ಗಂಧದ ಗುಡಿ’ ಟೀಸರ್‌ ಬಿಡುಗಡೆ: ನೆಚ್ಚಿನ ನಟನ ನೋಡಿ ಕಣ್ಣೀರಾಗುತ್ತಿರುವ ಅಭಿಮಾನಿಗಳು

    VIDEO: ಅಮ್ಮಾ ನಿನ್ನನ್ನು ಮಿಸ್‌ ಮಾಡಿಕೊಳ್ತಿದ್ದೆ ಎಂದು ಮಗ ಹೂಗುಚ್ಛ ಹಿಡಿದು ಬಂದರೆ, ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿದ ತಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts