

ನಾನು 27 ವರ್ಷದ ಯುವಕ. ನಾನು ಮೊದಲು ತಂಬಾಕು ಸೇವನೆ ಮಾಡುತ್ತಿದ್ದೆ. ಈಗ ನನ್ನ ಮದುವೆಯಾಗಿ 2 ವರ್ಷ ಆಗಿದೆ. ಈಗ ಯಾವುದೇ ದುಃಶ್ಚಟಗಳಿಲ್ಲ. ನನ್ನ ಸಮಸ್ಯೆ, ವೀರ್ಯಾಣುಗಳು ನಿಲ್ ಎಂದು ಪರೀಕ್ಷೆಯಲ್ಲಿ ಬಂದಿದೆ.
ಡಾಕ್ಟರ್ ಹತ್ತಿರ ತೋರಿಸಿದಾಗ ಕೆಲವು ಮಾತ್ರೆಗಳನ್ನು ಸೇವಿಸಲು ಹೇಳಿದರು. ಒಂದು ತಿಂಗಳ ಬಳಿಕ ಮತ್ತೆ ಪರೀಕ್ಷೆ ಮಾಡಿಸಿದರೆ ಆಗಲೂ ಹಾಗೆಯೇ ಬಂದು. ಹಾಗಾದರೆ, ನನಗೆ ಮಕ್ಕಳಾಗುವುದಿಲ್ಲವೇ? ಆಯುರ್ವೇದದಲ್ಲಿ ಇದಕ್ಕೆ ಪರಿಹಾರ ಇದೆಯೇ? ಆಹಾರ ಪದ್ಧತಿ ಹೇಗಿರಬೇಕು. ನಾನು ದೈಹಿಕವಾಗಿ ಆರೋಗ್ಯವಾಗಿದ್ದೇನೆ, ಮಾನಸಿಕವಾಗಿ ನೊಂದಿದ್ದೇನೆ. ದಯವಿಟ್ಟು ಸೂಕ್ತ ಪರಿಹಾರ ತಿಳಿಸಿ.
ಉತ್ತರ: ವೀರ್ಯಾಣುಗಳ ಸಂಖ್ಯೆ ಮತ್ತು ಚಲನೆಯಲ್ಲಿ ವ್ಯತ್ಯಾಸವಿದ್ದರೆ ಚಿಕಿತ್ಸೆಯಿಂದ ಹೆಚ್ಚಿಸಬಹುದು. ಆದರೆ, ವೀರ್ಯಾಣುಗಳ ಉತ್ಪತ್ತಿಯೇ ಆಗುತ್ತಿಲ್ಲ ಎಂದಾದರೆ, ಚಿಕಿತ್ಸೆಯಿಂದ ಪ್ರಯೋಜನವಿಲ್ಲ. ಚಿಕ್ಕವಯಸ್ಸಿನಲ್ಲಿ ಬರುವ ವೈರಸ್ ಸೋಂಕು, ಜನನಾಂಗದ ಭಾಗಕ್ಕೆ ಪೆಟ್ಟು ಬೀಳುವುದರಿಂದ ಮತ್ತು ವೃಷಣಕೋಶಗಳಲ್ಲಿನ ತೊಂದರೆಯಿಂದಾಗಿ ಹೀಗಾಗುತ್ತೆ. ಇನ್ನೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಿ. ಸಂಖ್ಯೆ ಅಥವಾ ಚಲನೆ ಕಂಡುಬಂದು, ಕಡಿಮೆಯಿದ್ದಲ್ಲಿ ಆಯುರ್ವೇದದಲ್ಲಿ ವಾಜೀಕರಣ, ಪಂಚಕರ್ಮದಂಥ ಅತ್ಯುತ್ತಮ ಚಿಕಿತ್ಸೆಗಳಿಂದ ಸರಿಪಡಿಸಿಕೊಳ್ಳಬಹುದಾಗಿ.
ಆದರೆ, ವೀರ್ಯಾಣುಗಳೇ ಇಲ್ಲದಿದ್ದಲ್ಲಿ ಯಾವ ಚಿಕಿತ್ಸೆಯಿಂದಲೂ ಅಂದರೆ ಆಯುರ್ವೇದ, ಅಲೋಪಥಿ, ಹೋಮಿಯೋಪಥಿ ಯಾವುದರಿಂದಲೂ ಪ್ರಯೋಜನವಿಲ್ಲ. ಆದ್ದರಿಂದ ಹಣ, ಸಮಯ, ಶಕ್ತಿ ಮತ್ತು ನೆಮ್ಮದಿ ಹಾಳುಮಾಡಿಕೊಳ್ಳುವುದಕ್ಕಿಂತ ಮನಸ್ಸನ್ನು ದೃಢಪಡಿಸಿಕೊಂಡು ದತ್ತು ಸ್ವೀಕಾರ ಮಾಡುವುದು ಉತ್ತಮವಾದುದು.
ಡಾ.ವಸುಂಧರಾ ಭೂಪತಿಯವರ ಹೆಚ್ಚಿನ ಸಲಹೆಗಳಿಗೆ ಕ್ಲಿಕ್ಕಿಸಿ: