ನಿಷೇಧಾಜ್ಞೆ ನಡುವೆಯೂ ಶಿವಮೊಗ್ಗದಲ್ಲಿ ನಿಲ್ಲದ ಹಿಂಸಾಚಾರ: ಮತ್ತೋರ್ವ ಹಿಂದೂ ಯುವಕನಿಗೆ ಚಾಕು ಇರಿತ

1326017
Published on

ಶಿವಮೊಗ್ಗ: ಸ್ವಾತಂತ್ರ್ಯದ ಅಮೃತೋತ್ಸವದ ಸಂತಸವನ್ನು ಆಚರಿಸುವ ದಿನವೇ ಶಿವಮೊಗ್ಗದಲ್ಲಿ ಹಿಂದೂ-ಮುಸ್ಲಿಂ ಸಂಘಟನೆಗಳು ನಡುವೆ ಕೋಮುದ್ವೇಷದ ಜ್ವಾಲೆ ಹೊತ್ತಿಕೊಂಡು ಉರಿಯುತ್ತಿದೆ.

ಶಿವಮೊಗ್ಗದ ಅಮೀರ್​ ಅಹಮದ್​ ವೃತ್ತದಲ್ಲಿ ಭಾರಿ ಗಲಾಟೆ ನಡೆಯುತ್ತಿದ್ದು, ಇದಾಗಲೇ 22 ವರ್ಷದ ಪ್ರೇಮ್​ ಸಿಂಗ್​ ಎಂಬ ಯುವಕನನ್ನು ಮುಸ್ಲಿಂ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿರುವ ಪ್ರೇಮ್​ ಸಿಂಗ್​ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕಿಡಿಗೇಡಿಗಳು ಮತ್ತೋರ್ವ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿ ಚಾಕು ಇರಿದಿದ್ದಾರೆ. ಅಶೋಕ‌ನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.

ಪ್ರವೀಣ್ ಕುಮಾರ್ (27) ಎಂಬ ಯುವಕನಿಗೆ ಚಾಕು ಇರಿದಿದ್ದಾರೆ. ಅಂಗಡಿ ಬಾಗಿಲು ಮುಚ್ಚಿ ಮನೆಗೆ ಹೋಗುವ ಸಂದರ್ಭದಲ್ಲಿ ಚಾಕು ಇರಿಯಲಾಗಿದೆ. ಚಾಕು ಚುಚ್ಚಿ ಪರಾರಿಯಾಗಿದ್ದಾರೆ ದುಷ್ಕರ್ಮಿಗಳು. ಪ್ರವೀಣ್​ ಅವರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದಾಗಲೇ ಗಲಾಟೆಯ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಗಲಾಟೆ ಮುಂದುವರೆದಿದೆ. ಭಾರಿ ಗಲಾಟೆ ಹಿನ್ನೆಲೆಯಲ್ಲಿ ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್​ ನಡೆಸಿದ್ದಾರೆ.

ಗಲಾಟೆ ಏನು?

ಸ್ವಾತಂತ್ರ್ಯದ ಸಂಭ್ರಮ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದ ವೀರ್​ ಸಾವರ್ಕರ್​ ಅವರ ಫ್ಲೆಕ್ಸ್​ ಅನ್ನು ಹಿಂದೂ ಯುವಕರು ಹಾಕಿದ್ದರು. ಅದನ್ನು ತೆಗೆದು ಟಿಪ್ಪು ಫೋಟೋ ಇಡಲು ಹೊರಟಿತ್ತು ಇನ್ನೊಂದು ಗುಂಪು. ನಂತರ ಪೊಲೀಸರು ಮಧ್ಯೆ ಪ್ರವೇಶಿಸಿ ಸಾವರ್ಕರ್ ಫೋಟೋ ತೆರವು ಮಾಡಿದರು. ಸಾವರ್ಕರ್ ಫೋಟೋ ತೆಗೆದು ಟಿಪ್ಪು ಫೋಟೊ ಇಡಲು ಪೊಲೀಸರು ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ಎರಡು ಕೋಮಿನ ನಡುವೆ ಜಟಾಪಟಿ ಶುರುವಾಯಿತು.

ಎರಡು ಕೋಮಿನವರಿಗೆ ಶಾಂತವಾಗಿರಲು ಪೊಲೀಸರು ಸೂಚನೆ ನೀಡಿದರು. ಈ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ ಶುರುವಾಯಿತು. ಪ್ರತಿಭಟನೆ ನಡೆಯುವ ಸ್ಥಳಕ್ಕೆ ನುಗ್ಗಲು ಯತ್ನಿಸಿದ ಮತ್ತೊಂದು ಕೋಮಿನ ಗುಂಪು ಟಿಪ್ಪು ಸುಲ್ತಾನ್ ಫ್ಲೆಕ್ಸ್ ಇಡಲು ಹೊರಟಿತು. ಗುಂಪು ಚದರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ಮಾಡಿದರು.

ಇದರ ನಡುವೆಯೇ ಕಿಡಿಗೇಡಿಗಳು ಮತ್ತಷ್ಟು ಗಲಾಟೆ ಸೃಷ್ಟಿಸುವ ಸಲುವಾಗಿ ಹಿಂದೂ ಯುವಕರನ್ನು ಟಾರ್ಗೆಟ್​ ಮಾಡಿಕೊಂಡು ಚಾಕು ಇರಿಯಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net