ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ರೆ ಮನೆಗೇ ಬರುತ್ತೆ ಎಕೆ-47! ಪರವಾನಗಿಯೂ ಬೇಡ, ದಾಖಲೆಗಳೂ ಅಗತ್ಯವಿಲ್ಲ!

parcel
Published on

ಇಸ್ಲಾಮಾಬಾದ್‌: ಮನೆಗೆ ಅಗತ್ಯ ಇರುವ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿ ತರಿಸಿಕೊಳ್ಳುವುದು ಹೊಸ ವಿಷಯವೇನಲ್ಲ. ಯಾವ ಸಾಮಗ್ರಿಗಳು ಬೇಕಾದರೂ ಈಗ ಸುಲಭದಲ್ಲಿ ಆನ್‌ಲೈನ್‌ನಲ್ಲಿ ಸಿಗುತ್ತವೆ. ಆದರೆ ಇದೀಗ ಎಕೆ-47 ಬಂದೂಕನ್ನೂ ತರಿಸಿಕೊಳ್ಳುವ ಅವಕಾಶವನ್ನು ಆನ್‌ಲೈನ್‌ನಲ್ಲಿ ಕಲ್ಪಿಸಲಾಗಿದೆ!

ಅಷ್ಟಕ್ಕೂ ಇಂಥದ್ದೊಂದು ವ್ಯವಸ್ಥೆ ಇರುವುದು ಪಾಕಿಸ್ತಾನದಲ್ಲಿ. ಬಂದೂಕು ಸೇರಿದಂತೆ ಯಾವುದೇ ಶಸ್ತ್ರಾಸ್ತ್ರಗಳನ್ನು ಆನ್‌ಲೈನ್‌ನಲ್ಲಿ ಇಲ್ಲಿ ತರಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದ್ದು, ಇದೀಗ ಇದು ಅಂತಾರಾಷ್ಟ್ರೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಪಾಕಿಸ್ತಾನದ ‘ಸಮಾ’ ಟಿವಿ ಈ ಬಗ್ಗೆ ವರದಿ ಮಾಡಿದೆ. ಪಿಜ್ಜಾಗಳನ್ನು ತರಿಸಿಕೊಳ್ಳುವಷ್ಟೇ ಸಲೀಸಾಗಿ ಬಂದೂಕುಗಳನ್ನು ತರಿಸಿಕೊಳ್ಳಬಹುದಾಗಿದೆ ಎಂದು ಅದರಲ್ಲಿ ವರದಿ ಬಿತ್ತರಿಸಲಾಗಿದೆ. ಸಾಮಾನ್ಯವಾಗಿ ಅಕ್ರಮ ಶಸ್ತ್ರಾಸ್ತ್ರಗಳ ಮಾರಾಟ ಮಾಡುವವರು ಇಂಥ ಚಟುವಟಿಕೆಗಳನ್ನು ಗುಪ್ತವಾಗಿ ನಡೆಸುತ್ತಾರೆ. ಆದರೆ ಪಾಕಿಸ್ತಾನದಲ್ಲಿ ಆನ್‌ಲೈನ್‌ನಲ್ಲಿ ಇದನ್ನು ತರಿಸಿಕೊಳ್ಳಬಹುದಾಗಿದೆ. ಇಷ್ಟೇ ಅಲ್ಲದೇ, ವಾಟ್ಸ್‌ಆ್ಯಪ್‌ ಗ್ರೂಪ್‌ ಮತ್ತು ಫೇಸ್‌ಬುಕ್‌ ಪೇಜ್‌ಗಳ ಮೂಲಕ 9 ಎಂಎಂ ಪಿಸ್ತೂಲ್‌ನಿಂದ ಹಿಡಿದು ಎಕೆ47 ರೈಫಲ್‌ವರೆಗಿನ ಶಸ್ತ್ರಾಸ್ತ್ರಗಳನ್ನು ಖರೀದಿಸಬಹುದಾಗಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಖುದ್ದು ಗ್ರಾಹಕನೊಬ್ಬ ಮಾಹಿತಿ ನೀಡಿದ್ದಾರೆ. ನಾನು ಇದಾಗಲೇ 38 ಸಾವಿರ ರೂಪಾಯಿಗೆ ಬಂದೂಕು ಖರೀದಿಸಿದ್ದೇನೆ. ಇದಕ್ಕಾಗಿ ಮುಂಗಡವಾಗಿ 10 ಸಾವಿರ ರೂಪಾಯಿ ನೀಡಿದ್ದೆ. ದೂಕು ಬಂದ ಬಳಿಕ 28 ಸಾವಿರ ರೂ. ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾನೆ.


ಪಾಕಿಸ್ತಾನದಲ್ಲಿ ಎರಡು ಪ್ರತ್ಯೇಕ ನೆಟ್‌ವರ್ಕ್‌ಗಳಿದ್ದು ಮೊದಲನೆಯದು ಶಸ್ತ್ರಾಸ್ತ್ರಗಳ ವ್ಯಾಪಾರಿ, ಎರಡನೆಯದು ಅದನ್ನು ತಲುಪಿಸುವವರು. ಕರಾಚಿಯಲ್ಲಿ ಅತಿ ಅಗ್ಗದ ವಿತರಣೆ ಸೌಲಭ್ಯವಿದೆ. ಮಾರುವ ಮತ್ತು ವಿತರಿಸುವ ಶಸ್ತ್ರಾಸ್ತ್ರಗಳ ಪ್ರಕಾರಕ್ಕೆ ಯಾವುದೇ ಮಿತಿಯಿಲ್ಲ. ಪರವಾನಗಿ ಇರಲಿ, ಬಿಡಲಿ ಒಟ್ಟಿನಲ್ಲಿ ಎಲ್ಲಾ ಶಸ್ತ್ರಾಸ್ತ್ರಗಳೂ ಸುಲಭದಲ್ಲಿ ಮಾರಾಟಕ್ಕೆ ಸಿಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net