

ರಾಮನಗರ: ಕಿರುತೆರೆ ನಟಿ ಸೌಜನ್ಯ ಅಲಿಯಾಸ್ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣ ಕ್ಷಣಕ್ಷಣಕ್ಕೂ ಕುತೂಹಲದ ತಿರುವು ಪಡೆಯುತ್ತಿದೆ. ಗುರುವಾರ (ಸೆ.30) ಬೆಂಗಳೂರಿನ ದೊಡ್ಡಬೆಲೆ ಗ್ರಾಮದ ಕುಂಬಳಗೋಡು ಅಪಾರ್ಟ್‍ಮೆಂಟ್‍ನಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ನಟಿ ಪತ್ತೆಯಾಗಿದ್ದರು. ಅನಾರೋಗ್ಯದ ನಿಮಿತ್ತ ತಾವು ಸಾಯುತ್ತಿರುವುದಾಗಿ ಅವರು ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್ ಕೂಡ ಸಿಕ್ಕಿದೆ.
ಈ ಮಧ್ಯೆಯೇ ರಾಮನಗರದಲ್ಲಿ ವಾಸವಿರುವ ಅವರ ತಾಯಿ ಕಣ್ಣೀರು ಹಾಕಿದ್ದು, ಮಗಳ ಸಾವನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದರೆ ನಾನು ನಂಬುವುದಿಲ್ಲ. ಮೂರು ಗಂಟೆಯ ಒಳಗೆ ಮನೆಗೆ ಬರುತ್ತೇನೆ. ನನ್ನ ಇಷ್ಟದ ಸೊಪ್ಪಿನ ಪಲ್ಯ, ಚಪಾತಿ, ಟೊಮ್ಯಾಟೋ ಸಾರು ಮಾಡಿಡು ಎಂದು ಫೋನ್‌ನಲ್ಲಿ ಹೇಳಿದ್ದಳು. ಆದರೆ ಅವಳ ಬದಲು ಸಾವಿನ ಸುದ್ದಿ ಬಂದಿದೆ. ಅವಳಿಗಾಗಿ ಎಲ್ಲಾ ರೆಡಿ ಮಾಡಿ ಇಟ್ಟಿದ್ದೆ. ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದರೆ ನನಗೆ ನಂಬಲು ಆಗುತ್ತಿಲ್ಲ ಎಂದು ದುಃಖಿಸಿದ್ದಾರೆ.
ನನ್ನ ಮಗ ಕೂಡ ಬೆಂಗಳೂರಿನಲ್ಲಿ ಇದ್ದಾನೆ. ಅವನೂ ಬರುವವನಿದ್ದ. ಆದರೆ ಸವಿ ಬಸ್‌ನಲ್ಲಿ ಬರುತ್ತೇನೆ ಎಂದಿದ್ದಳು. ಮಗ ಬೈಕ್‌ನಲ್ಲಿ ಬರುತ್ತೇನೆ ಅಂದಿದ್ದ. ಆದರೆ ಕರೆ ಮಾಡಿದಾಗ ಸವಿ ಚೆನ್ನಾಗಿಯೇ ಇದ್ದಳು. ಮೂರೇ ಮೂರು ತಾಸಿನಲ್ಲಿ ಬರುತ್ತೇನೆ. ಎಲ್ಲಾ ರೆಡಿ ಮಾಡಿಡು ಎಂದಿದ್ದಳು. ಆದರೆ ಹೀಗೆಕಾಯ್ತೋ ನಾ ಕಾಣೆ ಎಂದು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇದರಿಂದ ನಟಿಯ ಸಾವಿನ ಬಗ್ಗೆ ಇದೀಗ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ. ಇದಾಗಲೇ ಇವರ ತಂದೆ ಮಾದಪ್ಪ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ನಟ ಮಹೇಶ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಮಹೇಶ್ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸೌಜನ್ಯಾಳ ಪ್ರತಿ ಚಲನವಲನದ ಬಗ್ಗೆ ಮಹೇಶ್ಗೆ ಮಾಹಿತಿ ಇತ್ತು. ಆಕೆಯ ಕೆಲಸದ ವಿಚಾರ ಹಾಗೂ ಬ್ಯಾಂಕ್ ವ್ಯವಹಾರದ ಬಗ್ಗೆ ಮಹೇಶ್ಗೆ ಇಂಚಿಂಚು ತಿಳಿದಿತ್ತು ಎನ್ನಲಾಗಿದೆ.
25 ವರ್ಷದ ನಟಿ ಮೂಲತಃ ಕೊಡಗು ಜಿಲ್ಲೆಯ ಕುಶಾಲನಗರದವವರು, ಕನ್ನಡದ ಚೌಕಟ್ಟು, ಫನ್ ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇಂದು ಆರ್.ಆರ್.ಆಸ್ಪತ್ರೆಯಲ್ಲಿ ಮೃತಳ ಮರಣೋತ್ತರ ಪರೀಕ್ಷೆ ನಡೆಯಲಿದೆ.