ಬಿಳಿ ಕೂದಲಿನಲ್ಲಿಯೇ ಮದುವೆಯಾದ ನಟನ ಮಗಳು: ಸಹಜ ಸೌಂದರ್ಯಕ್ಕೆ ಮನಸೋತ ನೆಟ್ಟಿಗರು

niyathi
Published on

ನವದೆಹಲಿ: ಮದುವೆಯ ದಿನ ವಿಶಿಷ್ಟವಾಗಿ, ಅತ್ಯಂತ ಸುಂದರವಾಗಿ ಕಾಣಿಸಬೇಕು ಎಂದು ಮದುಮಕ್ಕಳು ಬಯಸುವುದು ಸಹಜ. ಅದರಲ್ಲಿಯೂ ವಧುವಿನ ಅಲಂಕಾರಕ್ಕೆ ಸಾಮಾನ್ಯ ಜನರೂ ಸಹಸ್ರಾರು ರೂಪಾಯಿ ಖರ್ಚು ಮಾಡುವುದಿದೆ. ಮೇಕಪ್‌, ಹೇರ್‌ಡ್ರೆಸ್‌ ಎಂದೆಲ್ಲಾ ದಿನವಿಡೀ ಆಕೆಯ ಅಲಂಕಾರ ನಡೆಯುತ್ತದೆ.‍ ಪ್ರಸಿದ್ಧ ಬ್ಯೂಟಿಷಿಯನ್‌ ಮೊರೆ ಹೋಗುತ್ತಾರೆ.

ಆದರೆ ನಟನ ಮಗಳೊಬ್ಬಳು ಇದಕ್ಕೆಲ್ಲಾ ಸೆಡ್ಡು ಹೊಡೆದು ಮದುವೆಯಾಗಿದ್ದು, ಇದೀಗ ಜಾಲತಾಣದಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಕಪ್ಪು ವರ್ಣವೇ ನಮ್ಮ ಹೆಮ್ಮೆ ಎಂದು ಅಭಿಯಾನ ಶುರುವಾಗಿರುವ ಈ ಹೊತ್ತಿನಲ್ಲಿ, ನಟನ ಮಗಳು ಹೊಸದೊಂದು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈಕೆಯ ನಿರ್ಧಾರಕ್ಕೆ ನೆಟ್ಟಿಗರು ಮನಸೋತಿದ್ದಾರೆ.

ಹಿಂದಿಯ ಪ್ರಸಿದ್ಧ ಧಾರಾವಾಹಿ ‘ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ’ದ ಮೂಲಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮನಸೂರೆಗೊಂಡ ನಟನೆಂದರೆ ಇದರ ಹೀರೋ ಜೇಠಾಲಾಲ್‌. ಇವರ ನಿಜವಾದ ಹೆಸರು ದಿಲೀಪ್‌ ಜೋಶಿ. ಅಮೋಘ ಅಭಿನಯದ ಮೂಲಕ ಎಲ್ಲರ ಮನಗೆದ್ದಿರುವ ದಿಲೀಪ್‌ ಅವರ ಮಗಳು ನಿಯತಿ ಕೂಡ ನೆಟ್ಟಿಗರ ಮನಗೆದ್ದಿದ್ದಾರೆ. ಇದಕ್ಕೆ ಕಾರಣ ಅವರದ್ದು ಚಿಕ್ಕವಯಸ್ಸಿನಲ್ಲಿಯೇ ಬಿಳಿಕೂದಲು ಆದರೂ ಹೇರ್ ಡೈ ಮಾಡದೇ ಮದುವೆ ಮಾಡಿಕೊಂಡಿದ್ದಾರೆ.

ಮದುಮಗಳ ದಿರಿಸಿನಲ್ಲಿ ತಮ್ಮ ಬಿಳಿಕೂದಲಿನ ಜತೆಗೇ ಮಂಟಪಕ್ಕೆ ಬಂದಾಗ ನಿಯತಿಯನ್ನು ನೋಡಿ ಅಲ್ಲಿದ್ದವರು ಅಚ್ಚರಿಗೊಂಡಿದ್ದಂತೂ ಸತ್ಯ. ಆದರೆ ಇರುವುದೇ ಉಂಟಂತೆ, ಇನ್ನೇಕೆ ಕೃತಕ ಸೌಂದರ್ಯ ಎಂದಿರುವ ನಿಯಮ, ಹೇರ್‌ ಡೈ ಮಾಡಿಕೊಳ್ಳಲಿಲ್ಲ,ಅವರಮುಖದಲ್ಲಿ ರಾಚುವಷ್ಟು ಮೇಕಪ್‌ ಕೂಡ ಇರಲಿಲ್ಲ. ಸಹಜ ಸೌಂದರ್ಯದಲ್ಲಿಯೇ ಮದುವೆಯಾಗಿದ್ದಾರೆ.

ಈ ಫೋಟೋ ಅನ್ನು ದಿಲೀಪ್‌ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶರೀರಕ್ಕೆ ಬಿಳಿ ಬಣ್ಣವೇ ಅಂದ ಎಂಬ ಮಾತನ್ನು ಧಿಕ್ಕರಿಸಿ ಇದಾಗಲೇ ಹಲವಾರು ಕೃಷ್ಣ ಸುಂದರಿಯರು ಮಿಂಚುತ್ತಿರುವ ಈ ಬಗ್ಗೆ ದೊಡ್ಡ ಅಭಿಯಾನವೇ ಶುರುವಾಗಿರುವ ಈ ಹೊತ್ತಿನಲ್ಲಿ ತಲೆಗೂದಲು ಕಪ್ಪಿದ್ದರಷ್ಟೇ ಅಂದ ಎಂಬ ಮಾತನ್ನೂ ಮೀರಿ ನಿಯತಿ ಇಂಥದ್ದೊಂದು ಹೊಸತನಕ್ಕೆ ನಾಂದಿ ಹಾಡಿದ್ದಾರೆ.

ಅಂದಹಾಗೆ ನಿಯತಿ, ಯಶೋವರ್ಧನ್ ಮಿಶ್ರಾ ಅವರನ್ನು ವಿವಾಹವಾಗಿದ್ದಾರೆ. ನಾಸಿಕ್‍ನಲ್ಲಿ ಗುಜರಾತಿ ಸಂಪ್ರದಾಯದಂತೆ ಮದುವೆ ನಡೆಯಿತು. ಇಲ್ಲಿರುವ ಊಟೋಪಚಾರಕ್ಕಿಂತ ಸುದ್ದಿಯಾದದ್ದು ನಿಯತಿ ಅವರ ಡ್ರೆಸ್‌. ನಿಮ್ಮ ಸೌಂದರ್ಯದ ಬಗ್ಗೆ ನಿಮಗಿರುವ ಆತ್ಮವಿಶ್ವಾಸ. ಬಿಳಿ ಕೂದಲಿನಲ್ಲೇ ನೀವು ಮದುಮಗಳಾಗಿ ಸಿದ್ಧಗೊಂಡಿರುವ ರೀತಿ ಮೆಚ್ಚುವಂತದ್ದು ಎಂದು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗೆ ಕಾಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net