

ಹಾಸನ: ಇಂದು ನಸುಕಿನ ವೇಳೆ ಹಾಸನ ನಗರದ ಹೊರವಲಯದ ಕೆಂಚಟ್ಟಳ್ಳಿ ಬಳಿ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ನಾಲ್ಕು ಮಂದಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಕ್ವಾಲೀಸ್ ಕಾರು ಮತ್ತು ಟಾಟಾ ಸುಮೋ ನಡುವೆ ಈ ಅಪಘಾತ ನಡೆದಿದೆ. ಘಟನೆಯಲ್ಲಿ 14 ಮಂದಿಗೆ ಗಾಯಗಳಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಟಾಸುಮೋಕ್ಕೆ ಹಿಂದುಗಡೆಯಿಂದ ಬಂದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ವರದಿ ಹೇಳಿದೆ. ಕೆಂಚಟ್ಟಳ್ಳಿ ಬಳಿ ಇದ್ದ ಹಂಪ್ಸ್ ಬಳಿ ಟಾಟಾಸುಮೋ ಚಾಲಕ ವಾಹನ ನಿಧಾನ ಮಾಡಿದಾಗ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಕ್ವಾಲಿಸ್ ಡಿಕ್ಕಿಯೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಕಾರಿನ ಈ ವೇಗಕ್ಕೆ ಟಾಟಾ ಸುಮೋ ಪಲ್ಟಿಹೊಡೆದಿದ್ದು, ಅದರಲ್ಲಿದ್ದ 10 ಮಂದಿಗೆ ಗಾಯಗಳಾಗಿವೆ.
ಟಾಟಾಸುಮೋದಲ್ಲಿದ್ದ ಎಲ್ಲರೂ ಮಳಬಾಗಿಲು ಮೂಲದವರಾಗಿದ್ದ ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಹೋಗುತ್ತಿದ್ದರು. ಕ್ವಾಲಿಸ್‍ನಲ್ಲಿದ್ದವರು ಕೆಜಿಎಫ್ ಮೂಲದವರಾಗಿದ್ದು ಉಡುಪಿಗೆ ಮದುವೆಗೆ ಹೋಗುತ್ತಿದ್ದರು. ಹಾಸನ ಎಸ್‍ಪಿ ಶ್ರೀನಿವಾಸ್‍ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೃತಪಟ್ಟವರನ್ನು ಸುನೀಲ್ ಕುಮಾರ್, ನವೀನ್ ಕುಮಾರ್, ಪ್ರದೀಪ್ ಕುಮಾರ್ ಹಾಗೂ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಹಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ