

ನವದೆಹಲಿ: ಅಮೆರಿಕ ಪಡೆ ಕಾಬುಲ್ ಅನ್ನು ತಾಲಿಬಾನಿಗಳಿಗೆ ಬಿಟ್ಟುಕೊಟ್ಟು ವಾಪಸ್ ನಿನ್ನೆ ರಾತ್ರಿ ಜಾಗ ಖಾಲಿ ಮಾಡಿಯಾಗಿದೆ. ಈ ನಡುವೆಯೇ ಭಯಾನಕ ವಿಡಿಯೋ ಒಂದು ವೈರಲ್ ಆಗುತ್ತಿದೆ. ರಾತ್ರೋರಾತ್ರಿ ಲಕ್ಷಾಂತರ ಮಂದಿ ಶೇರ್ ಮಾಡಿಕೊಂಡಿರುವ ಈ ವಿಡಿಯೋ ನೋಡಲು ಭಯಾನಕವಾಗಿದೆ.
ಅದೇನೆಂದರೆ ಅಮೆರಿಕ ಪಡೆ ವಾಪಸ್ ಹೋಗುತ್ತಿದ್ದಂತೆಯೇ ತಾಲಿಬಾನ್‌ಗಳು ಅಮೆರಿಕದ ಯೋಧನೊಬ್ಬನನ್ನು ಸಾಯಿಸಿ ಆತನ ಮೃತದೇಹವನ್ನು ಹೆಲಿಕಾಪ್ಟರ್‌ಗೆ ಕಟ್ಟಿ ಕಂದಹಾರ್‌ನಲ್ಲಿ ತಾಲಿಬಾನ್‌ಗಳು ಹಾರಿಸುತ್ತಿದ್ದಾರೆ ಎಂದು ವರದಿಯಾಗಿರುವ ವಿಡಿಯೋ ಇದು. ಇಸ್ಲಾಮಿಕ್ ಎಮಿರೇಟ್ ಆಫ್ಘಾನಿಸ್ತಾನದ ಅಧಿಕೃತ ಟ್ವಿಟರ್ ಖಾತೆ ಎಂದು ಹೇಳಲಾದ 'ತಾಲಿಬ್ ಟೈಮ್ಸ್'ನಲ್ಲಿ ಅಮೆರಿಕದ ತಾಲಿಬಾನ್ ವಶದಲ್ಲಿರುವ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗೆ ನೇಣು ಹಾಕಿದ ಮೃತದೇಹ ತೇಲಾಡುತ್ತಿರುವ ದೃಶ್ಯವಿರುವ ವಿಡಿಯೊ ಎಂದು ಹಂಚಿಕೊಳ್ಳಲಾಗಿದೆ.
ಎಂತೆಂಥ ಹೀನಾಯ ಕೃತ್ಯ, ಕ್ರೌರ್ಯ ಮೆರೆದಿರುವ, ಮೆರೆಯುತ್ತಿರುವ ತಾಲಿಬಾನಿಗಳು ಈ ರೀತಿ ಮಾಡಿದರೆ ಅದೇನು ದೊಡ್ಡ ವಿಷಯವೂ ಅಲ್ಲ, ಯಾರೂ ಅಚ್ಚರಿ ಪಡುವಂಥದ್ದೂ ಅಲ್ಲ. ಕಳೆದ ಕೆಲ ವಾರಗಳಿಂದ ರಕ್ತದೋಕುಳಿ ಹರಿಸಿರುವ ತಾಲಿಬಾನಿ ರಕ್ಕಸರಿಗೆ ಇದೇನು ಮಹಾ ಕೆಲಸವೂ ಅಲ್ಲ.
ಆದರೆ ಅಸಲಿಗೆ ಈ ವಿಡಿಯೋ ಮಾತ್ರ ಅಸಲಿಯದ್ದಲ್ಲ ಎಂದು ಕೆಲವು ಫ್ಯಾಕ್ಟ್‌ಚೆಕ್ ಸಂಸ್ಥೆಗಳು ಬಹಿರಂಗಪಡಿಸಿವೆ. ಅಮೆರಿಕದ ಯೋಧನಿಗೆ ಉರುಳು ಹಾಕಿ ಹೆಲಿಕಾಪ್ಟರ್‌ನಲ್ಲಿ ಹಾರಿಸಲಾಗುತ್ತಿದೆ ಎಂದು ಬಿಂಬಿಸಲಾಗುತ್ತಿರುವ ಈ ವಿಡಿಯೋದ ಅಸಲಿಯತ್ತೇ ಬೇರೆ ಎಂದು ಕೆಲವು ಸಂಸ್ಥೆಗಳು ಹೇಳಿವೆ.
ಹಾಗಿದ್ದರೆ ಅಸಲಿಯತ್ತೇನು?: ಫ್ಯಾಕ್ಟ್‌ಚೆಕ್ ಸಂಸ್ಥೆಗಳು ಹೇಳಿರುವ ಪ್ರಕಾರ, ವ್ಯಕ್ತಿಯೊಬ್ಬನನ್ನು ತಾಲಿಬಾನಿಗಳು ಹೆಲಿಕಾಪ್ಟರ್‌ಗೆ ತೂಗು ಹಾಕಿಕೊಂಡು ಹೋಗುತ್ತಿರುವುದು ನಿಜ. ಆದರೆ ಆ ವ್ಯಕ್ತಿ ಅಮೆರಿಕದವನು ಅಲ್ಲ, ಬದಲಿಗೆ ತಾಲಿಬಾನಿ ಹೋರಾಟಗಾರ ಎಂದು ಹೇಳಿದೆ. ಅಷ್ಟಕ್ಕೂ ಈ ಹೋರಾಟಗಾರನನ್ನು ನೇಣಿಗೆ ಹಾಕಲಿಲ್ಲ, ಆತನನ್ನು ಸಾಯಿಸಲೂ ಇಲ್ಲ. ಬದಲಿಗೆ ಆತ ಎಲ್ಲಾ ಕಚೇರಿಗಳ ಮೇಲ್ಭಾಗದಲ್ಲಿ ತಾಲಿಬಾನ್ ಬಾವುಟವನ್ನು ನೆಡುವ ಸಲುವಾಗಿ ಹೆಲಿಕಾಪ್ಟರ್‌ನಲ್ಲಿ ಹೋಗುತ್ತಿರುವುದಾಗಿ ಫ್ಯಾಕ್ಟ್‌ಚೆಕ್ ಸಂಸ್ಥೆಗಳು ತಿಳಿಸಿವೆ.
ಈ ವಿಡಿಯೋ ಫುಟೇಜ್ ಅನ್ನು ಸಮೀಪದಿಂದ ವಿಶ್ಲೇಷಿಸಿರುವ ಈ ಸಂಸ್ಥೆಗಳು, ಇಡೀ ಅಫ್ಘಾನಿಸ್ತಾನ ಅಧಿಕೃತವಾಗಿ ತಾಲಿಬಾನಿಗಳ ವಶವಾಗಿರುವ ಹಿನ್ನೆಲೆಯಲ್ಲಿ ತಾಲಿಬಾನ್ ನಾಯಕನ ಆದೇಶದ ಮೇರೆಗೆ ಎಲ್ಲ ಪ್ರಮುಖ ಕಚೇರಿಗಳ ಮೇಲೆ ತಾಲಿಬಾನಿಗಳ ಬಾವುಟ ಹಾರಿಸಲಾಗುತ್ತಿದೆ. ಸ್ಪಷ್ಟವಾಗಿ ವಿಡಿಯೋ ನೋಡಿದರೆ ಈ ಹೋರಾಟಗಾರನ ಭುಜಕ್ಕೆ ಹಗ್ಗವನ್ನು ಕಟ್ಟಲಾಗಿದೆ, ಮಾತ್ರವಲ್ಲದೇ ಆತ ಕೈ-ಕಾಲು ಆಡಿಸುತ್ತಾ ಪ್ರಮುಖ ಕಚೇರಿಯ ಮೇಲ್ಭಾಗದಲ್ಲಿ ಹೆಲಿಕಾಪ್ಟರ್‌ನಿಂದ ಇಳಿಯುವುದನ್ನು ಕಾಣಬಹುದಾಗಿದೆ ಎಂದು ಅವು ಹೇಳಿವೆ.
ಸ್ಥಳೀಯ ಆಲ್ಟ್‌ನ್ಯೂಸ್ ವರದಿಯ ಪ್ರಕಾರ ಈ ವೈರಲ್ ವಿಡಿಯೋದಲ್ಲಿ ತಾಲಿಬಾನಿ ಹೋರಾಟಗಾರ ಗವರ್ನರ್ ಅವರ ಕಚೇರಿ ಮೇಲೆ ಬಾವುಟ ಹಾರಿಸುವುದನ್ನು ನೋಡಬಹುದಾಗಿದೆ ಎಂದು ಹೇಳಿದೆ.
ಇಲ್ಲಿವೆ ನೋಡಿ ವಿಡಿಯೋ: